– ರಾಗಿ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ
– ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಬರುತ್ತಿಲ್ಲ ಮಹಿಳೆಯರು
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಂತೂ ಪುಲ್ ಖುಷಿಯಾಗಿದ್ದಾರೆ. ಆದರೆ ಇದೇ ಗ್ಯಾರಂಟಿ ಈಗ ಇನ್ನೊಂದು ಕಡೆದ ರೈತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.
ಈಗ ಹಳ್ಳಿಗಾಡಿನಲ್ಲಿ ರಾಗಿ ಕಟಾವು ಮಾಡಿ ಮನೆ ತುಂಬಿಸಿಕೊಳ್ಳುವ ಸಮಯ. ಆದರೆ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕಾಯಕ ಮಾಡಲು ಕೂಲಿಯಾಳುಗಳು ಸಿಗುತ್ತಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ರಾಗಿ ಕಟಾವು ಮಾಡುವ ಸಮಯದಲ್ಲಿ ಇಲ್ಲಿಯವರೆಗೆ ಕಾರ್ಮಿಕರ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಬಹಳಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಈ ಬಾರಿ ರಾಗಿ ಕಟಾವಿಗೆ ದುಬಾರಿ ಯಂತ್ರದ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಭತ್ತ ಕತ್ತರಿಸುವ ಯಂತ್ರಗಳನ್ನು ತರಿಸಿ, ಅರೆಬರೆ ಫಸಲನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ರೈತರಾದ ನರಸಿಂಹಮೂರ್ತಿ ಹೇಳಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?
ಚಂಡಮಾರುತದಿಂದ ಜಡಿ ಮಳೆ ಆಗುತ್ತಿದ್ದು ರಾಗಿ ಕಟಾವಿಗೆ ಕೊಡಬಾರದ ಕಾಟ ಕೊಡುತ್ತಿದೆ. ಕಾರ್ಮಿಕರಿದ್ದರೆ ಸರಿಯಾದ ಸಮಯದಲ್ಲಿ ಫಸಲು ತೆಗೆಯಬಹುದಿತ್ತು. ಆದರೆ ಕಾರ್ಮಿಕರು ಸಿಗದ ಕಾರಣ ಬಂದ ಬೆಳೆ ಹಾಳಾಗದೇ ಇರಲು ರೈತರು ಈಗ ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಈಗ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ ಬಂದಿದೆ.
ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಬರುತ್ತಿದೆ. ರಾಜ್ಯಾದ್ಯಂತ ಬಸ್ಸಿನಲ್ಲಿ ಉಚಿತವಾಗಿ ಓಡಾಡಬಹುದು. ಸರ್ಕಾರಿಂದಲೇ ಅಕ್ಕಿ ಸಹ ಉಚಿತವಾಗಿ ಸಿಗುತ್ತಿದೆ. ವಿದ್ಯುತ್ ಬಿಲ್ ಸಹ ಪಾವತಿಸುವ ಅಗತ್ಯವಿಲ್ಲ. ಈ ಕಾರಣದಿಂದ ಈಗ ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ರೈತರಾದ ಅಶ್ವತ್ಥಪ್ಪ ಬೇಸರ ತೋಡಿಕೊಂಡಿದ್ದಾರೆ.
ರಾಗಿ ಕಟಾವು ಮಾಡುವ ಯಂತ್ರಕ್ಕೆ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ 2,700 ರೂ. ದರ ನಿಗದಿಮಾಡಿದೆ. ದರ ನಿಗದಿಯಾಗಿದ್ದರೂ ಬೇಡಿಕೆ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಯಂತ್ರಗಳ ಮಾಲೀಕರು ರೈತರ ಬಳಿ ಹೆಚ್ಚು ಹಣ ಪಡೆದು ರಾಗಿ ಕಟಾವು ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಸಹ ಬರುತ್ತಿವೆ.