ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (GBA) ನಿರ್ಮಾಣವಾಗುತ್ತಿರುವ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ (Bidadi Integrated Township) ರೈತರು ವಿರೋಧ ವ್ಯಕ್ತಪಡಿಸಿದ್ದು, ಇಂದು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಜಮೀನು ನೀಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಬಿಡದಿ ಹೋಬಳಿಯ 9 ಗ್ರಾಮಗಳ ಸುಮಾರು 9,600 ಎಕರೆ ವ್ಯಾಪ್ತಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಸ್ಥಳೀಯ ರೈತರು (Farmers) ವಿರೋಧ ವ್ಯಕ್ತಪಡಿಸಿ ಕಳೆದ ಎರಡು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇಂದು ಟೌನ್‌ಶಿಪ್ ವ್ಯಾಪ್ತಿಗೆ ಒಳಪಡುವ ಭೂಮಾಲೀಕರು ಹಾಗೂ ರೈತರ ಜೊತೆ ದರ ನಿಗದಿ ಹಾಗೂ ಪುನರ್ವಸತಿ ಕುರಿತು ಸಭೆ ಕರೆದಿದ್ದ ಜಿಲ್ಲಾಧಿಕಾರಿ, ರೈತರಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಇದನ್ನೂ ಓದಿ: ಮಾಜಿ ಸಚಿವರ ಮನೆಯಲ್ಲಿ ಕಳ್ಳತನ – ಆರೋಪಿಗಳು ಮುಚ್ಚಿಟ್ಟಿದ್ದ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ಹಣ ವಶ
ಇಂದು ಮ.12ಕ್ಕೆ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ರೈತರು ಸಭೆಗೆ ಬನ್ನಿ ಎಂದು ನೋಟೀಸ್ ನೀಡಿದ್ದ ಹಿನ್ನೆಲೆ ಇಂದು 500ಕ್ಕೂ ಹೆಚ್ಚು ರೈತರು ಡಿಸಿ ಕಚೇರಿ ಬಳಿ ಆಗಮಿಸಿದ್ದರು. ಆದರೆ ಸಭೆಗೆ ಕೇವಲ 30 ಮಂದಿ ರೈತರಿಗೆ ಮಾತ್ರ ಅವಕಾಶ ಕೊಡುವುದಾಗಿ ಜಿಲ್ಲಾಡಳಿತ ತಿಳಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬೆಂ-ಮೈ ಹಳೇ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿ ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದು ಕೆಲ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ರೊಚ್ಚಿಗೆದ್ದ ರೈತರು ಬಂಧಿಸಲು ತಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ನಾಲ್ಕು ಚಕ್ರದ ಗಾಳಿ ತೆಗೆದಿದ್ದು ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಇದನ್ನೂ ಓದಿ: ಕತ್ತು ಕೊಯ್ದು ಹತ್ಯೆ ಕೇಸ್ – ಪೊಲೀಸ್ ಅಂತಾ ಬೆದರಿಸಿ ಕಾಲೇಜು ವಿದ್ಯಾರ್ಥಿಗಳೊಂದಿಗೆ `ಮಿಷನ್ ಯಾಮಿನಿ’ ವಾಟ್ಸಪ್ ಗ್ರೂಪ್ ಮಾಡಿದ್ದ ಹಂತಕ
ಇನ್ನೂ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ 30 ಮಂದಿ ರೈತರ ಜೊತೆ ಡಿಸಿ ಸಭೆಗೆ ತೆರಳಿ ಎಲ್ಲಾ ರೈತರಿಗೂ ಅವಕಾಶ ನೀಡುವಂತೆ ಡಿಸಿಯನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೂ ರೈತರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿ ಎಲ್ಲಾ ರೈತರಿಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು. ಬಳಿಕ ಒಮ್ಮೆ 50 ಮಂದಿ ರೈತರು ಆಕ್ಷೇಪಣೆ ಸಲ್ಲಿಸಲು ಅನುವು ಮಾಡಿಕೊಡಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಯಾವ ನವೆಂಬರ್ ಕ್ರಾಂತಿಯೂ ಇಲ್ಲ: ಡಿ.ಕೆ.ಶಿವಕುಮಾರ್
ಒಟ್ಟಾರೆ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರ ಪರ-ವಿರೋಧಕ್ಕೆ ಕಾರಣವಾಗಿದ್ದು, ಕೆಲ ಭೂ ಮಾಲೀಕರು ಡಿಸಿ ಸಭೆಯಲ್ಲಿ ಟೌನ್‌ಶಿಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಇನ್ನುಳಿದ ರೈತರು ಯಾವುದೇ ಕಾರಣಕ್ಕೂ ಭೂಮಿ ನೀಡಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಹೋರಾಟ ಮತ್ತಷ್ಟು ತೀವ್ರವಾಗಲಿದ್ದು, ಯಾವ ಹಂತಕ್ಕೆ ತಲುಪಲಿದ್ಯೋ ಕಾದುನೋಡಬೇಕಿದೆ. ಇದನ್ನೂ ಓದಿ: ಆರ್‌ಸಿಬಿ ಮಾರಾಟ ಅಧಿಕೃತ – ಖರೀದಿ ರೇಸ್‌ನಲ್ಲಿದ್ದಾರೆ ಟಾಪ್ ಉದ್ಯಮಿಗಳು

