ಬೆಂಗಳೂರು: ನಾಳೆ ರೈತರು ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಸಿಲಿಕಾನ್ ಸಿಟಿ ಜನತೆಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕ ಭಾಗ ಸೇರಿದಂತೆ ಅನೇಕ ಭಾಗದ ರೈತರು ನಾಳೆ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಇಷ್ಟು ದಿನವಾದರೂ ಪ್ರವಾಹಪರಿಹಾರವನ್ನು ಸಮರ್ಪಕವಾಗಿ ವಿತರಿಸಿಲ್ಲ. ಕೂಡಲೇ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.
Advertisement
ನಾಳಿನ ಪ್ರತಿಭಟನೆಗೆ ಐದು ಸಾವಿರಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆಯಿದ್ದು, ಇನ್ನೊಂದಡೆ ಜೆಡಿಎಸ್ ಪ್ರತಿಭಟನೆಯೂ ನಡೆಯಲಿದೆ.
Advertisement
Advertisement
ಅಧಿವೇಶನದ ಬೆನ್ನಲ್ಲೆ ನಾಳೆ ಪ್ರತಿಭಟನೆಯ ಕಾವು ಜೋರಾಗಿದ್ದು, ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ವಿಧಾನಸೌಧ ಮುತ್ತಿಗೆಗೆ ಕರೆಕೊಟ್ಟಿದ್ದಾರೆ. ರೈತರು ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ರ‍್ಯಾಲಿ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಬೃಹತ್ ಮೆರವಣಿಗೆ ನಡೆಯುವುದರಿಂದ ಕಾರ್ಪೋರೇಷನ್, ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಹಾಗೂ ಶೇಷಾದ್ರಿಪುರಂ ಬಳಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.
Advertisement
ರೈತರ ಬೇಡಿಕೆಗಳೇನು?
ಉತ್ತರ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು. ಪ್ರತಿ ಎಕರೆಗೆ 25 ಸಾವಿರದಂತೆ ಬೆಳೆ ಹಾನಿ ಪರಿಹಾರ ಕೊಡಬೇಕು. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ನಷ್ಟವಾದ ಕೃಷಿ ಭೂಮಿಗೆ ಪರಿಹಾರ ನೀಡಬೇಕು ಹಾಗೂ ಪರ್ಯಾಯ ಭೂಮಿ ಕೊಡಬೇಕು. ಅಲ್ಲದೆ ಪದೇ ಪದೆ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು. ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಬ್ಯಾಂಕುಗಳು ಸಾಲದ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ.
ಜೆಡಿಎಸ್ ರ‍್ಯಾಲಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಾಳೆ ಜೆಡಿಎಸ್ ಸಹ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದೆ. ಉತ್ತರ ಕರ್ನಾಟಕ ನೆರೆಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಕೊಟ್ಟಿಲ್ಲ, ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ ಮತ್ತು ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿ ತಾರತಮ್ಯ ಮಾಡಿದೆ ಎಂದು ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿ ಜೆಪಿ ಭವನದಿಂದ ರ‍್ಯಾಲಿ ಆರಂಭವಾಗಲಿದ್ದು, ಫ್ರೀಡಂ ಪಾರ್ಕ್‍ವರೆಗೂ ಪಾದಯಾತ್ರೆ ನಡೆಯಲಿದೆ. ನಾಳೆ ಅಧಿವೇಶನ ಇರುವುದರಿಂದ ಅಧಿವೇಶನದ ಒಳಗೆ ಪಕ್ಷದ ಶಾಸಕರು ಹೋರಾಟ ನಡೆಸಲಿದ್ದಾರೆ. ಅಧಿವೇಶನ ಹೊರಗೆ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಮುಖಂಡರು, ಮಾಜಿ ಶಾಸಕರು, ಕಾರ್ಯಕರ್ತರು ನಾಳಿನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.