DavanagereDistrictsKarnatakaLatestMain Post

ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

ದಾವಣಗೆರೆ: ರಾಗಿಯ ಬೆಂಬಲ ಬೆಲೆ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ದಾವಣಗೆರೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರದಿಂದ ರೈತರಿಗಾಗಿ ಖರೀದಿ ಕೇಂದ್ರಗಳನ್ನು ತೆರೆದರೆ ಅದು ಕೇವಲ ದಲ್ಲಾಳಿಗಳಿಗೆ ಮಾತ್ರ ಲಾಭ. ರೈತರು ಏನಾದರೂ ನೊಂದಣಿ ಮಾಡಿಕೊಳ್ಳಲು ಹೋದರೆ ಸಾಕು, ಸರ್ವರ್ ಬ್ಯುಸಿ ಬರುತ್ತಿದೆ. ಕೇವಲ ಸಣ್ಣ ರೈತರಿಗಷ್ಟೇ ಖರೀದಿ ಕೇಂದ್ರ ಉಪಯೋಗವಾಗುತ್ತಿದ್ದು, ದೊಡ್ಡ ರೈತರನ್ನು ನಿರ್ಲಕ್ಷಿಸಲಾಗಿದೆ. ಸಣ್ಣ ರೈತರ ಹೆಸರನ್ನು ದಲ್ಲಾಳಿಗಳು ಉಪಯೋಗಿಸಿಕೊಂಡು ಅಕ್ರಮ ನೊಂದಣಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಆವರಣದ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ನುಗ್ಗಿದ ಆಲೂರು, ಮಲ್ಲಾಪುರ, ರೈತರು, ರೈತಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಇದೆ ಎಂದು ಹೇಳಿದ ರೈತರು ದಲ್ಲಾಳಿಗಳು ಕೊಟ್ಟ ರೈತರ ಲಿಸ್ಟ್ ಅನ್ನು ಪ್ರೂಟ್ ಐಡಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅಡಿಕೆ, ಗುಲಾಬಿ ತೋಟವಿರುವ ರೈತರೂ ಇದ್ದಾರೆ. ಜಿಪಿಎಸ್ ಮಾಡುವಾಗ ರಾಗಿ ಬೆಳೆ ಬೆಳೆದ ರೈತರನ್ನು ಬಿಟ್ಟು ಬೇರೆಯವರ ಹೆಸರನ್ನು ಅಪ್ಲೋಡ್ ಮಾಡಲಾಗಿದೆ. ಆದ ಕಾರಣ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ನೆನಪಿನಾರ್ಥ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿದ ಮಳಮಾಚನಹಳ್ಳಿ ಗ್ರಾಮಸ್ಥರು

ದೊಡ್ಡ ರೈತರು ಜಿಲ್ಲೆಯಲ್ಲಿ ಸಾಕಷ್ಟು ರಾಗಿ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್‌ಗೆ 3,377 ರೂ. ನಿಗದಿಪಡಿಸಲಾಗಿದ್ದು, ಹೊರಗಿನ ಮಾರುಕಟ್ಟೆಯಲ್ಲಿ ಕೇವಲ 1,500-1,800 ರೂ.ಗೆ ಮಾರಾಟವಾಗುತ್ತಿದೆ. ಮುಂಗಾರು ಬೆಳೆಗೆ ಮಾತ್ರ ಅವಕಾಶ ನೀಡಿದ್ದು, ಹಿಂಗಾರಿನಲ್ಲಿ ಬಂದಿರುವ ರಾಗಿಯನ್ನು ಏನು ಮಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿ, ನಗರದ ಪಿಬಿ ರಸ್ತೆ ತಡೆದು ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿದ್ದಾರೆ.

2 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದ ಆಲೂರು, ಮಲ್ಲಾಪುರ, ಹಳೇ ಬೇತೂರು ಗ್ರಾಮದ ರೈತರು ದಾವಣಗೆರೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು. ಸಾರಿಗೆ ಸಂಚಾರ ವ್ಯತ್ಯಯವಾಗಿದ್ದರಿಂದ ಪೊಲೀಸರು ಮತ್ತು ಪ್ರತಿಭಟನೆ ನಿರತ ರೈತರೊಡನೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಎಸಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿ, ರೈತರ ಮನವೊಲಿಸಿ ಪೋರ್ಟಲ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಪ್ರೂಟ್ ಐಡಿಯಲ್ಲಿ ಪಾರದರ್ಶಕತೆ ಕಾಪಾಡದ ಹೊರತು ಯಾರಿಂದಲೂ ರಾಗಿ ಖರೀದಿಸದಂತೆ ರೈತರು ಒತ್ತಾಯ ಮಾಡಿದರು. ಇದನ್ನೂ ಓದಿ: ಹಿರಿಯ ನಟಿ ತಾರಾ ತಾಯಿ ಪುಷ್ಪಾ ವಿಧಿವಶ

ಸರ್ಕಾರದ ಆದೇಶದಂತೆ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೆಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಎಪಿಎಂಸಿ ಪ್ರಾಂಗಣದಲ್ಲಿ ರೈತರ ನೋಂದಣಿ ಮತ್ತು ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ರಾಗಿ ಮಾರಾಟ ಮಾಡಲು ಬಾಕಿ ಇರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ‘ಪ್ರೂಟ್ ಐಡಿ’ಯೊಂದಿಗೆ ಆಯಾ ತಾಲೂಕಿನ ಖರೀದಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಂಡು ರಾಗಿ ಮಾರಾಟ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 3,377 ರೂ. ದರದಲ್ಲಿ ಖರೀದಿಸಲಾಗುವುದು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುವುದು. ಉತ್ತಮ ಗುಣಮಟ್ಟದ ರಾಗಿ ಮಾತ್ರ ಖರೀದಿ ಮಾಡಲಾಗುವುದು. ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು, 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Back to top button