ಮಂಡ್ಯ/ಮೈಸೂರು: ಕೆ.ಆರ್.ಎಸ್ ಜಲಾಶಯ ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸ್ತಿರೋ ಶಂಕೆ ವ್ಯಕ್ತವಾಗ್ತಿದೆ.
ರಾತ್ರೋರಾತ್ರಿ ನೀರಾವರಿ ಇಲಾಖೆ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಿಸಿದೆ. ಸಾವಿರ ಕ್ಯೂಸೆಕ್ ಇದ್ದ ಹೊರ ಹರಿವಿನ ಪ್ರಮಾಣ 2,300 ಕೂಸೆಕ್ ಗೆ ಏರಿಕೆಯಾಗಿದೆ. ಜಲಾಶಯ ತುಂಬುವ ಮೊದಲೇ ನದಿಗೆ ಹೆಚ್ಚಿನ ನೀರು ಬಿಡುತ್ತಿರೋ ಬಗ್ಗೆ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾಲೆಗೆ ನೀರು ಬಿಡಿ ಎಂದ್ರೆ ನದಿಗೆ ನೀರು ಬಿಟ್ಟ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ರೈತರ ಪ್ರತಿಭಟನೆ, ಎಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ. ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ ಇದ್ದು, ಎಸ್‍ಪಿ ಜಿ. ರಾಧಿಕಾ ನೇತೃತ್ವದಲ್ಲಿ ಹೆಚ್ಚಿನ ಗಸ್ತು ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಪೊಲೀಸರ ಆಗಮನವಾಗಿದೆ.
Advertisement
ತಮಿಳುನಾಡಿಗೆ ನೀರು ಬಿಟ್ಟರೆ ಬಲಿಯಾಕ್ತೀವಿ ಎಂದು ನೀರಾವರಿ ಇಲಾಖೆ ಅಧಿಕಾರಿಗೆ ಮಾಜಿ ಸಂಸದ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿಜಯ್ ಕುಮಾರ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಅವರು, ಹೊರ ಹರಿವು ಹೆಚ್ಚಳದ ಬಗ್ಗೆ ಮಾಹಿತಿ ಕೇಳಿದ್ರು. ಈ ವೇಳೆ ಅಧಿಕಾರಿಗಳು ಮಾದೇಗೌಡರಿಗೆ ಸುಳ್ಳು ಮಾಹಿತಿ ನೀಡಿದ್ದು, ಬೆಂಗಳೂರು ಜನರ ಕುಡಿಯುವ ಉಪಯೋಗಕ್ಕೆಂದು ಹೇಳಿದ್ದಾರೆ. ಈಗಾಗಲೇ ರೈತರು ಹೋರಾಟ ಮಾಡ್ತಿದ್ದಾರೆ. ನೀರು ಬಿಟ್ಟರೆ ರೋಡಲ್ಲಿ ಓಡಾಡೋಕೆ ಬಿಡಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಹೋರಾಟ ಶುರುವಾಗಿದೆ. ಮಂಡ್ಯದ ರೈತ ಸಂಘದಿಂದ ಪ್ರತ್ಯೇಕ ಹೋರಾಟ ನಡೆದಿದೆ. ಮಂಡ್ಯದ ಸರ್.ಎಂ.ವಿ ಪ್ರತಿಮೆ ಬಳಿ ರೈತರಿಂದ ಹೆದ್ದಾರಿ ತಡೆ ತಡೆದು ಪ್ರತಿಭಟಿಸಲಾಗಿದ್ದು, ಮತ್ತೊಂದು ಬಣದಿಂದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಬೆಂಗಳೂರಿನ ಮೈಸೂರು ಹೆದ್ದಾರಿ ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿನ ಕಬಿನಿ ಡ್ಯಾಂ ನಿಧನವಾಗಿ ಭರ್ತಿಯಾಗುತ್ತಿದೆ. ಇದರಿಂದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ, ಅಷ್ಟರಲ್ಲೇ ಕಬಿನಿ ಜಲಾಶಯದ ಅಧಿಕಾರಿಗಳು ಅನಧಿಕೃತವಾಗಿ ಜಲ ವಿದ್ಯುತ್ ಕಂಪನಿ ಬಳಕೆಗಾಗಿ ಡ್ಯಾಂನಿಂದ ನೀರು ಹರಿಸಿದ್ದು, ಇದರಿಂದ ರೈತರು ಸಿಟ್ಟಿಗೆದ್ದಿದ್ದಾರೆ.
ಜಲಾಶಯದ ಗರಿಷ್ಟ ಮಟ್ಟ 2284 ಅಡಿ ಇದೆ. ಇವತ್ತು ಜಲಾಶಯದ ನೀರಿನ ಮಟ್ಟ 2260 ಅಡಿ ಇದೆ. ಒಳಹರಿವಿನ ಪ್ರಮಾಣ 7,500 ಕ್ಯೂಸೆಕ್ ಇದ್ದು, ಅಧಿಕೃತವಾಗಿ ಹೊರ ಹರಿವು 1,100 ಕ್ಯೂಸೆಕ್ ಇದೆ. ಆದರೆ ಡ್ಯಾಂನಿಂದ ನೀರು ಹರಿಯುತ್ತಿರುವ ಪ್ರಮಾಣ ನೋಡಿದರೆ ಹೊರ ಹರಿವು 3 ಸಾವಿರ ಕ್ಯೂಸೆಕ್ ಗಿಂತಾ ಹೆಚ್ಚಿತ್ತು.
ಇದರಿಂದ ಸಿಟ್ಟಿಗೆದ್ದ ಸ್ಥಳೀಯ ರೈತರು ಜಲಾಶಯದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಯಾವಾಗ ಪ್ರತಿಭಟನೆ ಬಿಸಿ ಜೋರಾಯಿತೋ ಆ ತಕ್ಷಣ ಅಧಿಕಾರಿಗಳು ಡ್ಯಾಂನ ಹೊರ ಹರಿವು ಪ್ರಮಾಣವನ್ನು ತಗ್ಗಿಸಿದ್ದಾರೆ. ಖಾಸಗಿ ಕಂಪನಿ ಜೊತೆ ಶಾಮೀಲಾಗಿರೋ ಅಧಿಕಾರಿಗಳು ಕಂಪನಿಗಾಗಿ ಡ್ಯಾಂ ನೀರು ಹರಿಸಿ ರೈತರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.