ಗದಗ: ಈರುಳ್ಳಿಗೆ (Onion) ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅಲ್ಲದೇ ಕೂಡಲೇ ಈರುಳ್ಳಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿ ಗದಗನಲ್ಲಿ (Gadag) ರೈತರು ಪ್ರತಿಭಟನೆ ಮಾಡಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ‍್ಯಾಲಿ ನಡೆಸಿದರು. ಅತಿವೃಷ್ಟಿಯಿಂದ ಸಾಕಷ್ಟು ಬೆಳೆಗಳು ಹಾಳಾದ್ರೂ ಪರಿಹಾರ ನೀಡದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದ್ದಾರೆ. ಈರುಳ್ಳಿ ಬೆಳೆ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತನದ್ದಾಗಿದೆ. ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರು, ಬೆಲೆ ಕುಸಿದ ಪರಿಣಾಮವಾಗಿ ಕಣ್ಣೀರು ಸುರಿಸುವಂತಾಗಿದೆ. ಈರುಳ್ಳಿ ಬೆಳೆಗೆ ಬೆಂಬಲ ಘೋಷಣೆ ಮಾಡಿ, ಖರೀದಿ ಕೇಂದ್ರ ಸ್ಥಾಪಿಸಿ ಅಂತ ಆಗ್ರಹಿಸಿದರು. ಇದನ್ನೂ ಓದಿ: ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ
ರೈತರು ಬೆಳೆದ ಈರುಳ್ಳಿ ಬೆಲೆ ಕುಸಿದಿದ್ದರಿಂದ ಈರುಳ್ಳಿಯನ್ನು ಮರಳಿ ಮಣ್ಣಲ್ಲೇ ಮುಚ್ಚುವಂತ ಸ್ಥಿತಿ ನಿರ್ಮಾಣವಾಗ್ತಿದೆ. ಸದ್ಯ ಈರುಳ್ಳಿ ಬೆಲೆ ಕುಸಿದಿದ್ದರಿಂದ ಕಟಾವು ಮಾಡಿದ ಖರ್ಚು ಸಹ ನಮಗೆ ಸಿಗ್ತಿಲ್ಲ. ಕಟಾವು ಮಾಡಿದ ಕೂಲಿ ಕಾರ್ಮಿಕರ ಕೂಲಿ ದುಡ್ಡು ನೀಡಲು ನಾವು ಶಕ್ತರಿಲ್ಲ. ಅತಿವೃಷ್ಠಿಗೆ ಬೆಳೆ ಹಾಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ನಗರದ ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ತಡೆದರು. ನಂತರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.