ಮೈಸೂರು: ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ಖಂಡಿಸಿ ಟಿ.ನರಸೀಪುರದ ಕಾವೇರಿ ನದಿಗೆ ಇಳಿದು ರೈತರು ಪ್ರತಿಭಟನೆ ನಡೆಸಿದ್ದಾರೆ.
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ರಾತ್ರೋ ರಾತ್ರಿ 6000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 13,000 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದ ಭರ್ತಿಗೆ ಇನ್ನು 10 ಅಡಿ ಬಾಕಿ ಇದೆ. ಜಲಾಶಯ ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರೋದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರು ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಕೊನೆಗೆ ದೋಣಿಗಳ ಸಹಾಯದಿಂದ ಪ್ರತಿಭಟನಾಕಾರರನ್ನ ದಡಕ್ಕೆ ಕರೆತರಲಾಯಿತು.
Advertisement
ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿರುವ ಮೇಲಾಧಿಕಾರಿಗಳ ಆದೇಶವನ್ನಷ್ಟೆ ಪಾಲನೆ ಮಾಡ್ತಿದ್ದೇವೆ ಎಂದು ಜಲಾಶಯದ ಅಧಿಕಾರಿಗಳು ಹೇಳಿದ್ದಾರೆ. ಜಲಾಶಯದಿಂದ ನೇರವಾಗಿ ನದಿಯ ಮೂಲಕ 6,000 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟಿದ್ದಾರೆ. ನಾಲೆಗಳ ಮೂಲಕ ನೀರು ಬಿಟ್ಟಿದ್ದರೆ ರೈತರಿಗೆ ಅನುಕೂಲವಾಗಿ ಕೆರೆ ಕಟ್ಟೆಗಳು ತುಂಬುತ್ತಿದ್ದವು. ಆದರೆ ನದಿಯ ಮೂಲಕ ಬಿಟ್ಟ ನೀರು ಕೇವಲ ತಮಿಳುನಾಡಿಗೆ ಮಾತ್ರ ಹರಿಯಲಿದೆ. ಹೀಗಾಗಿ ಈ ಭಾಗದ ರೈತರಿಗೆ ಯಾವ ಪ್ರಯೋಜನವು ಇಲ್ಲದಂತಾಗಿದೆ ಅನ್ನೋದು ರೈತರ ಆರೋಪವಾಗಿದೆ.
Advertisement
ಸದ್ಯ ಜಲಾಶಯದ ಇಂದಿನ ನೀರಿನ ಮಟ್ಟ 2273.30 ಅಡಿಗಳಷ್ಟಿದ್ದು, ಜಲಾಶಯದ ಗರಿಷ್ಠ ಮಟ್ಟ 2284 ಅಡಿ, ತುಂಬೋಕೆ ಇನ್ನು 10 ಅಡಿ ಮಾತ್ರ ಬಾಕಿ ಇದೆ.