ದಾವಣಗೆರೆ: ಒಂದೆಡೆ ಜಿಲ್ಲೆಯಲ್ಲಿ ಮಳೆ ಸಮರ್ಪಕವಾಗಿ ಬಾರದೇ ರೈತರು ಕಂಗೆಟ್ಟಿದ್ದರೆ, ಇನ್ನೊಂದೆಡೆ ಉಳುಮೆ ಮಾಡಲು ಎತ್ತುಗಳು ಸಿಗದೇ ಕಂಗಾಲಾಗಿದ್ದು ಬೈಕ್ ಸಹಾಯದಿಂದ ಉಳುಮೆ ಮಾಡಲು ಮುಂದಾಗಿದ್ದಾರೆ.
ಭೂಮಿ ಹದವಿದ್ದಾಗಲೇ ಉಳುಮೆ ಮಾಡಬೇಕು. ಆದರೆ, ಎತ್ತುಗಳಿಲ್ಲದ ರೈತರಿಗೆ ಈ ಸಂದರ್ಭದಲ್ಲಿ ಉಳುಮೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಅಲ್ಲದೆ, ಸೀಸನ್‍ನಲ್ಲಿ ಬಾಡಿಗೆಗೆ ಎತ್ತುಗಳೂ ಸಹ ಸಿಗುವುದಿಲ್ಲ. ಹೇಗಾದರೂ ಮಾಡಿ ಉಳುಮೆ ಮಾಡಬೇಕಲ್ಲ ಎಂದು ಚಿಂತಿಸಿದ ರೈತರು ಬೈಕ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತರೊಬ್ಬರು ಎತ್ತುಗಳು ಸಿಗದೇ ಕಂಗಾಲಾಗಿದ್ದು, ಹೀಗಾಗಿ ಮನೆಯಲ್ಲಿದ್ದ ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದಾರೆ. ರೈತ ನೀಲಪ್ಪ ಅವರು ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದು, ಹೊಲ ಉಳುಮೆ ಮಾಡಲು ಎತ್ತುಗಳು ಸಿಗದೇ ಬೈಕ್‍ಗೆ ಮೊರೆ ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಒಬ್ಬರಿಗೆ ಉಳುಮೆ ಮಾಡಲು ಸಾಧ್ಯವಾಗದ ಕಾರಣ ನೀಲಪ್ಪ ಅವರ ಮಗ ಸಹ ತಂದೆಗೆ ಸಹಾಯ ಮಾಡಿದ್ದಾರೆ. ಎತ್ತು ಬಾಡಿಗೆ ಪಡೆದು ಉಳುಮೆ ಮಾಡಲು ಸುಮಾರು ಎರಡು ಸಾವಿರ ರೂ.ಹಣ ಬೇಕು. ಅಲ್ಲದೆ, ಈ ಸಂದರ್ಭದಲ್ಲಿ ಎತ್ತುಗಳೂ ಸಹ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಹೀಗಾಗಿ ಬೈಕ್ ಮೂಲಕ ಉಳುಮೆ ಮಾಡುತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ಚನ್ನಗಿರಿ ತಾಲೂಕು ಬರಕ್ಕೆ ಸಿಲುಕಿದ್ದು ಸ್ವಲ್ಪ ಮಳೆಯಾದಾಗಲೂ ಸಹ ಎಲ್ಲರೂ ಉಳುಮೆ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಎತ್ತುಗಳು ಸಿಗುವುದಿಲ್ಲ. ನಮಗೆ ಕೇವಲ ಅರ್ಧ ಎಕರೆ ಜಮೀನು ಇದ್ದು, ಹೀಗಾಗಿ ಬೈಕ್ ಮೂಲಕವೇ ಉಳುಮೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.