ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ಬಳಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ನೂತನ ಪವರ್ ಗ್ರಿಡ್ ಲೈನ್ ಅಳವಡಿಕೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಪವರ್ ಲೈನ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಬುಚನಹಳ್ಳಿ ಗ್ರಾಮದ ಬಳಿ ಧರ್ಮಪುರಿಯಿಂದ ಮಧುಗಿರಿಯವರೆಗೂ ನೂತನ ಪವರ್ ಗ್ರಿಡ್ ಲೈನ್ ಅಳವಡಿಸಲು ಪವರ್ ಗ್ರಿಡ್ ಕಾರ್ಪೋರೇಷನ್ ಮುಂದಾಗಿದೆ. ಇನ್ನೂ ಲೈನ್ ಅಳವಡಿಕೆಗೆ ರೈತರ ಭಾರೀ ವಿರೋಧ ವ್ಯಕ್ತವಾಗಿದ್ದು, ಕೆಲಸ ಮಾಡುತ್ತಿದ್ದ ಲೈನ್ ಕಾಮಗಾರಿಯನ್ನ ರೈತರು ತಡೆದಿದ್ದಾರೆ. ಅಲ್ಲದೆ ರೈತರು ಸರ್ವೆಯಾಗಿ ಪರಿಹಾರ ನೀಡುವವರೆಗೂ ಲೈನ್ ಕಾಮಗಾರಿಯನ್ನ ಮಾಡಬಾರದೆಂದು ಆಗ್ರಹಿಸಿದ್ದಾರೆ.
ರೈತರು ಪವರ್ ಗ್ರಿಡ್ ಲೈನ್ ಹಿಡಿದು ಜೋತು ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನ ಹಾಕಿದ್ದಾರೆ. ಬುಚನಹಳ್ಳಿ ಬಳಿಯ ಲೈನ್ ಹಿಡಿದು ರೈತರು ನಮ್ಮ ಪ್ರಾಣ ಬಿಡ್ತೆವೆ, ಲೈನ್ ಅಳವಡಿಕೆಗೆ ಅವಕಾಶ ಯಾವುದೇ ಕಾರಣಕ್ಕೂ ನೀಡಲ್ಲ ಅಂತಾ ಎಚ್ಚರಿಕೆಯನ್ನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪವರ್ ಲೈನ್ ಅಳವಡಿಕೆ ಮಾಡುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.
ರೈತರ ವಿರೋಧದ ಹಿನ್ನಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪವರ್ ಲೈನ್ ಹಿಡಿದು ವಿನೂತನವಾಗಿ ಪ್ರತಿಭಟನೆಯನ್ನ ನಡೆಸುತ್ತಿರುವ ರೈತರ ಮನವೊಲಿಸಲು ಪೊಲಿಸರು ಹರಸಾಹಸವನ್ನ ಪಡ್ತಿದ್ದಾರೆ. ಅಲ್ಲದೆ ಲೈನ್ ಎಳೆಯುತ್ತಿರುವ ಕಾರ್ಮಿಕರನ್ನ ಕೂಡಲೇ ನಿಲ್ಲಿಸುವಂತೆ ನೂರಾರು ರೈತರು ಒತ್ತಾಯಿಸಿದ್ದಾರೆ.