ರಾಯಚೂರು: ಬಿಸಿಲನಾಡು ಜಿಲ್ಲೆಯಲ್ಲಿ ಕಳೆದ 30 ವರ್ಷಗಳಲ್ಲಿ ಕಂಡರಿಯದಷ್ಟು ಕಡಿಮೆ ಮಳೆ ದಾಖಲಾಗಿ ಭೀಕರ ಬರಗಾಲ ಎದುರಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಕೆಳಭಾಗಕ್ಕೆ ಸಿಗದೆ ಬೆಳೆಯೆಲ್ಲಾ ಹಾಳಾಗುತ್ತಿದೆ. ಒಂದೆಡೆ ರೈತರು ನಿತ್ಯ ಹೋರಾಟ, ಪ್ರತಿಭಟನೆಗಳನ್ನ ನಡೆಸಿದ್ದರೆ ಮೂರು ಗ್ರಾಮಗಳ ರೈತರು ಮಾತ್ರ ಹೇಳಿಕೊಳ್ಳದಂತ ಖುಷಿ ಹಾಗೂ ಆತಂಕ ಅನುಭವಿಸುತ್ತಿದ್ದಾರೆ.
ರಾಯಚೂರು ತಾಲೂಕಿನ ಬೂಳಾಪುರ, ಚಿಕ್ಕಮಂಚಾಲಿ, ಪಂಚಮುಖಿ ಗಾಣಧಾಳ ಗ್ರಾಮದ ರೈತರಿಗೆ ಸಾವಿರ ಅಲ್ಲಾ, ಲಕ್ಷವೂ ಅಲ್ಲ, ಬರೋಬ್ಬರಿ 1 ಕೋಟಿ 50 ಲಕ್ಷ ರೂಪಾಯಿ ಹಣ ಈ ಮೂರು ಗ್ರಾಮಗಳ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಆದರೆ ಇದು ಯಾವ ದುಡ್ಡು ಅಂತ ಯಾರಿಗೂ ಗೊತ್ತಿಲ್ಲ.
Advertisement
Advertisement
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಗಾಣಧಾಳ ಶಾಖೆಯ 93 ಜನರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮಾ ಆಗಿದೆ. ಒಬ್ಬರಿಗೆ ಮೂರು ಲಕ್ಷ, ಇನ್ನೊಬ್ಬರಿಗೆ ಎರಡು ಲಕ್ಷ, ಮತ್ತೊಬ್ಬರಿಗೆ 80 ಸಾವಿರ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಮೊತ್ತದ ಹಣ ಜಮಾ ಆಗಿದೆ. ಕಾರಣವೇ ತಿಳಿಯದೇ ಬಂದ ಹಣ ಎಲ್ಲಿ ವಾಪಸ್ ಹೋಗುತ್ತದೋ ಅನ್ನೋ ಆತಂಕ ರೈತರಲ್ಲಿ ಮೂಡಿದೆ ಎಂದು ಗ್ರಾಮಸ್ಥ ಲಕ್ಷ್ಮಣ ಗೌಡ ಅವರು ಹೇಳಿದ್ದಾರೆ.
Advertisement
Advertisement
ನೀರಿಲ್ಲದೆ, ಸಾಲಮನ್ನಾ ಗೊಂದಲ ಪರಿಹಾರವಾಗದೆ ರೈತರು ಒಂದೆಡೆ ಹೋರಾಟ ಮಾಡುತ್ತಿದ್ದರೆ ಅನುಮಾನಾಸ್ಪದ ರೀತಿಯ ಹಣ ಈ ರೈತರಿಗೆ ಸಿಕ್ಕಿದೆ. ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಹಣವಾ, ಬೆಳೆಹಾನಿ ಪರಿಹಾರನಾ, ಜೀರೋ ಬ್ಯಾಲೆನ್ಸ್ ಅಕೌಂಟ್‍ನ ದುಡ್ಡು ಏನಾದರೂ ಬಂದಿದಿಯಾ ಒಂದೂ ಗೊತ್ತಿಲ್ಲ. ತೆರಿಗೆ ಕಟ್ಟಲಾರದವರ ಬೇನಾಮಿ ಹಣ ಏನಾದರೂ ರೈತರ ಖಾತೆಗೆ ಬಂದಿದೆಯಾ ಅನ್ನೋ ಗೊಂದಲ ಮೂಡಿವೆ. ಆದರೆ ಜಿಲ್ಲಾಡಳಿತವಾಗಲಿ, ಬ್ಯಾಂಕ್ ಅಧಿಕಾರಿಗಳಾಗಲಿ ರೈತರ ಖಾತೆಗೆ ಜಮಾ ಆಗಿರುವ ಹಣದ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ ಎಂದು ರಾಜ್ಯ ರೈತಸಂಘ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದ್ದಾರೆ.
ಮಳೆ ಸುರಿಯುವುದನ್ನ ಕಾಯುತ್ತಾ ಆಕಾಶ ನೋಡುತ್ತಿದ್ದ ರೈತರಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಹಣದ ಮಳೆ ಸುರಿದಿದೆ. ಬೆಳೆ ಪರಿಹಾರವಾಗಿ ಹಿಂದೆಲ್ಲ 100, 200 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಈಗ ಲಕ್ಷಾಂತರ ರೂಪಾಯಿ ಕೊಟ್ಟಿರುವುದರ ಹಿಂದೆ ಏನೋ ಇದೆ ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಸಂಬಂಧಪಟ್ಟವರ ಉತ್ತರಕ್ಕಾಗಿ ರೈತರು ಕಾದು ಕುಳಿತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews