ರಾಮನಗರ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ ಗ್ರೇಟರ್ ಬೆಂಗಳೂರು (Greater Bengaluru) ಪ್ರಾಧಿಕಾರ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನಲ್ಲೇ ಯೋಜನೆಯನ್ನ ವಿರೋಧಿಸಿ ಬಿಡದಿ (Bidadi) ಭಾಗದ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಕೆಲಸ ಆಗುತ್ತಿದೆ ಎಂದು ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬಿಡದಿ ಭಾಗದ 24 ಗ್ರಾಮಗಳನ್ನ ಸೇರ್ಪಡೆ ಮಾಡಿಕೊಂಡಿರುವ ಸರ್ಕಾರದ ಕ್ರಮಕ್ಕೆ ಸ್ಥಳೀಯ ರೈತರ ವಿರೋಧ ವ್ಯಕ್ತವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ರೈತರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದು, ಗ್ರೇಟರ್ ಬೆಂಗಳೂರು ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಇಂದು ಬಿಡದಿ ಸಮೀಪದ ಹೊಸೂರಿನ ಮದ್ದೂರಮ್ಮನ ದೇವಾಲಯದ ಬಳಿ ಸುಮಾರು 500ಕ್ಕೂ ಹೆಚ್ಚು ರೈತರು ಸಭೆ ನಡೆಸಿ ಸರ್ಕಾರದ ನಿಲುವನ್ನ ಖಂಡಿಸಿದ್ದಾರೆ. ಇದನ್ನೂ ಓದಿ: ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ – ಮಾ.15ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಬಿಡದಿ ಬಳಿ 24 ಗ್ರಾಮಗಳ 9,600 ಎಕರೆ ಪ್ರದೇಶದಲ್ಲಿ ರೈತರು ಮತ್ತು ಸರ್ಕಾರದ ಪಾಲುದಾರಿಕೆಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಪುಟ ಅನುಮೋದನೆ ಪಡೆದಿದೆ. ಈ ಯೋಜನೆಗಾಗಿ ಖಾಸಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಮುಂದಾಗಿದ್ದು, ಇದರಿಂದ 3,072 ಭೂ ಮಾಲೀಕರು ಜಮೀನು ಕಳೆದುಕೊಳ್ಳಲಿದ್ದಾರೆ. ರೈತರ ಪಾಲುದಾರಿಕೆಯಲ್ಲಿಯೇ ಯೋಜನೆ ಜಾರಿ ಮಾಡುವುದಾಗಿ ಹೇಳುವ ಸರ್ಕಾರ ಈವರೆಗೂ ಯಾವೊಬ್ಬ ರೈತನ ಅಭಿಪ್ರಾಯ ಕೇಳಿಲ್ಲ. ಯೋಜನೆ ಜಾರಿಯಾದರೇ ಈ ಭಾಗದ ಸಾವಿರಾರು ಎಕರೆ ಕೃಷಿ ಭೂಮಿ, ಸುಮಾರು 10 ಲಕ್ಷ ಮರ ಗಿಡಗಳನ್ನು ಕಳೆದುಕೊಳ್ಳುವ ಆತಂಕ ರೈತರಲ್ಲಿ ಎದುರಾಗಿದ್ದು, ಕೃಷಿ ಭೂಮಿಯನ್ನ ರೈತರಿಗೆ ಉಳಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: 400 ಪ್ರಯಾಣಿಕರಿದ್ದ ಪಾಕ್ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ
ಇನ್ನೂ ಸರ್ಕಾರ ಗುರುತಿಸಿರುವ ಜಾಗ ಕೃಷಿಗೆ ಯೋಗ್ಯವಾದ ಫಲವತ್ತಾದ ಭೂಮಿ. ಇದರ ಮೂಲಕವೇ ಲಕ್ಷಾಂತರ ಮಂದಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಿಂದಲೇ ಪ್ರತಿ ದಿನ ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ತೋಟಗಾರಿಕೆ, ರೇಷ್ಮೆ ಮೂಲಕ ರೈತ ಕೂಡ ಪ್ರತಿ ತಿಂಗಳು 50,000 ರೂ.ವರೆಗೂ ಸಂಪಾದನೆ ಮಾಡುತ್ತಿದ್ದಾನೆ. ಈಗ ಏಕಾಏಕಿ ಯೋಜನೆ ಜಾರಿ ಆದರೆ ರೈತರಿಗೆ ಭವಿಷ್ಯದ ಆತಂಕ ಎದುರಾಗಿದೆ. ಹಾಗಾಗಿ ಇಂದು ಸಭೆ ನಡೆಸಿದ ರೈತರು ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಬಿಡದಿಯಿಂದ ರಾಮನಗರದ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ವಿಭಾಗ ಮಾಡ್ಬೇಡಿ- ವಿಧಾನ ಪರಿಷತ್‌ನಲ್ಲಿ ಬಿಜೆಪಿ ಆಗ್ರಹ
ಒಟ್ಟಾರೆ ಗ್ರೇಟರ್ ಬೆಂಗಳೂರು ಮೂಲಕ ಹೊಸಹೊಸ ಟೌನ್ ಶಿಪ್ ನಿರ್ಮಾಣ ಮಾಡಲು ಚಿಂತಿಸಿರುವ ಸರ್ಕಾರಕ್ಕೆ ರೈತರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದು, ಸರ್ಕಾರ ರೈತರ ಮನವೊಲಿಸುತ್ತಾ ಅಥವಾ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈಬಿಡುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ – ಸಂತಾನಕ್ಕಾಗಿ ಸರ್ಪ ಸಂಸ್ಕಾರ ಪೂಜೆ?