ರಾಮನಗರ: ರಾಮನಗರ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇದೆ. ಆದರೆ ಈಗ ಹೆಚ್ಚುವರಿ ರೇಷ್ಮೆಗೂಡು ಮಾರುಕಟ್ಟೆಯನ್ನು ಸರ್ಕಾರಿ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಿದ್ದಕ್ಕೆ ಸಿಟ್ಟಿಗೆದ್ದ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ ಏಕಾಏಕಿ ರಸ್ತೆಗೆ ಅಡ್ಡಲಾಗಿ ಕುಳಿತ ರೇಷ್ಮೆ ರೈತರು ಪ್ರತಿಭಟನೆಗೆ ಮುಂದಾದರು. ಬಸ್ ನಿಲ್ದಾಣದಲ್ಲಿ ಪೂರ್ವ ತಯಾರಿಯಿಲ್ಲದೇ ಏಕಾಏಕಿ ಮಾರುಕಟ್ಟೆ ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ ಮಾರುಕಟ್ಟೆಗೆ ಗೂಡು ಹೊತ್ತು ತಂದ ರೈತರನ್ನು ಪ್ರವೇಶ ದ್ವಾರದ ಬಳಿಯೇ ಪೊಲೀಸರು ತಡೆ ಹಿಡಿದರು. ಮಿಶ್ರ ತಳಿಯ ಗೂಡು ಹರಾಜನ್ನು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, ರೈತರಿಗೆ ಅಲ್ಲಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು. ಅರ್ಧದಷ್ಟು ರೈತರು ಬಸ್ ನಿಲ್ದಾಣಕ್ಕೆ ತೆರಳಿದರೆ, ಉಳಿದ ರೈತರು ಹಳೆಯ ಮಾರುಕಟ್ಟೆ ಸ್ಥಳದಲ್ಲಿಯೇ ಹರಾಜಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ್ದಾರೆ.
Advertisement
Advertisement
ರೈತರ ಪ್ರತಿಭಟನೆ ಬಳಿಕ ಅಧಿಕಾರಿಗಳು ಹಳೆಯ ಮಾರುಕಟ್ಟೆಯಲ್ಲಿಯೇ ರೇಷ್ಮೆ ಗೂಡು ಹರಾಜಿಗೆ ಅವಕಾಶ ಕಲ್ಪಿಸಿದರು. ಹೀಗಾಗಿ ರೈತರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತಲೆ ಮೇಲೆ ಮೂಟೆ ಹೊತ್ತು ಓಡಾಡುತ್ತಿದ್ದರು. ರಾಮನಗರ ಜಿಲ್ಲೆಯಲ್ಲಿ ಬಹುತೇಕ ರೈತರು ಹೆಚ್ಚಾಗಿ ಹಳದಿ ರೇಷ್ಮೆ ಗೂಡನ್ನು ಬೆಳೆಯುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಬಿಳಿ ಗೂಡನ್ನು ಬೆಳೆಯುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಬಿಳಿ ರೇಷ್ಮೆ ಗೂಡಿಗೆ ಅವಕಾಶ ಕಲ್ಪಿಸಿ, ಹಳದಿ ಗೂಡಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಾರುಕಟ್ಟೆ ನೀಡಿದ್ದು ರೈತರ ಕಣ್ಣು ಕೆಂಪಾಗಿಸಿತ್ತು.
Advertisement
Advertisement
ಹೊರ ಜಿಲ್ಲೆ, ರಾಜ್ಯದ ಜನರಿಗೆ ಮಣೆ ಹಾಕುವ ಮೂಲಕ ಅಧಿಕಾರಿಗಳು ಕೇವಲ ಬಿಳಿ ಗೂಡಿಗೆ ಪ್ರಾಶಸ್ತ್ಯ ನೀಡಿ, ಹಳದಿ ಗೂಡನ್ನು ಬೇಕಾಬಿಟ್ಟಿ ಹರಾಜು ಪ್ರಕ್ರಿಯೆ ನಡೆಸಲು ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೂ ರೈತರ ಒತ್ತಡಕ ಮಣಿದ ಮಾರುಕಟ್ಟೆ ಅಧಿಕಾರಿಗಳು ಹಳೆಯ ಮಾರುಕಟ್ಟೆಯಲ್ಲೇ ಎರಡೂ ತಳಿಯ ಗೂಡು ಹರಾಜಿಗೆ ಅವಕಾಶ ನೀಡಿದರು. ಹೀಗಾಗಿ ಬೆಳ್ಳಂಬೆಳಗ್ಗೆಯೇ ರೇಷ್ಮೆ ಮಾರುಕಟ್ಟೆ ಗೊಂದಲದ ಗೂಡಾಗಿತ್ತು.