ಭೂತಾಯಿಗೆ ಪೂಜೆ ಸಲ್ಲಿಸಿದ ರೈತರು

Public TV
1 Min Read
KPL FARMERS

ಕೊಪ್ಪಳ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ರೈತಾಪಿ ವರ್ಗದವರು ಎಳ್ಳು ಅಮಾವಾಸ್ಯೆಯ ದಿನದಂದು ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಜಮೀನಿನಲ್ಲಿ ಬೆಳೆದಿರುವ ಫಸಲಿಗೆ ಪೂಜೆ ಸಲ್ಲಿಸಿದ್ದಾರೆ.

ಎಳ್ಳು ಅಮವಾಸ್ಯೆ ದಿನದಂದು ಗ್ರಹಣ ಹಿನ್ನೆಲೆಯಲ್ಲಿ ಇಂದು ರೈತರು ಎತ್ತು ಬಂಡಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿದ್ದರು. ಜೊತೆಗೆ ನೆರೆಹೊರೆಯವರು, ಸ್ನೇಹಿತರನ್ನು ಕರೆದುಕೊಂಡು ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಭೂಮಿಗೆ ಬಿತ್ತಿದ ಫಸಲು ಚೆನ್ನಾಗಿ ಬರಲಿ ಎಂದು ಬೆಳೆದು ನಿಂತಿರುವ ಬೆಳೆಗಳಿಗೆ ಹೊಲದಲ್ಲಿರುವ ಐದು ಕಲ್ಲುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಹುಡಿ ತುಂಬಿದರು.

ed940d92 2f6d 4029 86a4 ce54dbf5d38c

ನೈವೇದ್ಯ ಮಾಡಿ ಆ ನೈವೇದ್ಯವನ್ನು ಇಡೀ ಹೊಲದ ತುಂಬೆಲ್ಲಾ ಚೆಲ್ಲಿ ತಮ್ಮನ್ನು ಕಾಪಾಡುವ ಭೂತಾಯಿಗೆ ಉಣಬಡಿಸುವರು. ಎಳ್ಳು ಹೊಳಿಗೆ, ಸೇಗಾ ಹೊಳಿಗೆ, ಸಜ್ಜಿ ರೋಟಿ, ಬಿಳಿಜೊಳದ ರೋಟಿ, ಸೇಗಾ ಚಟ್ನಿ, ಗುರೇಳ್ಳು ಚಟ್ನಿ, ಅನೇಕ ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಹೊಲಕ್ಕೆ ಹೋಗಿ ಪೂಜೆ ಮಾಡಿ ಚರಗ ಚಲ್ಲಿದ್ದು ವಿಶೇಷವಾಗಿತ್ತು.

ಊಟದ ಸವಿ:
ಎಣ್ಣೆ ಬುಟ್ಟಿಯಲ್ಲಿ ತಂದ ಅಡುಗೆಯನ್ನು ಬಿಚ್ಚಿ ಕುಟುಂಬದವರು, ಬೀಗರು, ನೆರೆಹೊರೆಯವರು ಮತ್ತು ಸ್ನೇಹಿತರು ಸಾಮೂಹಿಕವಾಗಿ ಗಂಟೆಗಟ್ಟಲೇ ಊಟ ಸವಿದಿದ್ದಾರೆ. ಹೊಲದ ಫಸಲಿನ ಇಳುವರಿ ಕುರಿತು ‘ಕಾಕಾ ಈ ಸಲ ಗೋದಿ ಇಪ್ಪತ್ತು ಚೀಲ ಆದೀತನ, ಜ್ವಾಳಾ ಒಂದು ಮೂವತ್ತ ಚೀಲ ಆದೀತನ’ ಎಂದು ಲೆಕ್ಕಾಚಾರ ಹಾಕುತ್ತಾ ಊಟ ಸವಿದರು. ಮತ್ತೆ ಹೊಲದಲ್ಲಿನ ಕಡಲೆ ಗಿಡ ಕಿತ್ತುಕೊಂಡು ಸವಿಯುತ್ತಾ ಸಂಜೆಯಾಗುತ್ತಿದ್ದಂತೆ  ಮನೆಗೆ ಹೋಗಿದ್ದಾರೆ.

KPL FARMERS 1

ಹೊಲದಲ್ಲಿ ಉತ್ತಮ ಫಸಲು:
ಹಿಂಗಾರಿ ಜೋಳ, ಕಡಲೆ, ಗೋಧಿ ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಗಳು ಚೆನ್ನಾಗಿ ಬಂದಿವೆ. ಎಳ್ಳು ಅಮಾವಾಸ್ಯೆ ರೈತ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ. ಎಂದಿನಂತೆಯೇ ಸಂಬಂಧಿಕರು, ಸ್ನೇಹಿತರಿಗೆ, ಆತ್ಮೀಯ ಒಡನಾಡಿಗಳಿಗೆ ಹೊಲಕ್ಕೆ ಊಟಕ್ಕೆ ಬರಲು ಆಹ್ವಾನ ನೀಡಿದ್ದರು. ಹೊಲದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಪೂಜೆ ಸಲ್ಲಿಸಿ, ಎಳ್ಳು ಅಮಾವಾಸ್ಯೆ ಆಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *