ಬೆಂಗಳೂರು: ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಾನು ನಿಮ್ಮ ಜೊತೆ ಇದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದರೂ ನೆಲಮಂಗಲದ ರೈತರು ಈಗ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದಲ್ಲಿರುವ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಜನ್ಮ ಸ್ಥಳವಾದ ವೀರಾಪುರ ಗ್ರಾಮ ಹಾಗೂ ಅಕ್ಕಪಕ್ಕದ ನಾಲ್ಕಾರು ಗ್ರಾಮ ರೈತರು ಸರ್ಕಾರದ ನೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಭೂಮಿಯನ್ನು ಉಳುಮೆ ಮಾಡಿಕೊಂಡ ರೈತರು ಕಂದಾಯ ಕಟ್ಟಿ ತಮ್ಮ ಹೆಸರಿಗೆ ಎಲ್ಲಾ ದಾಖಲೆಗಳನ್ನು ಕಾನೂನು ಬದ್ಧವಾಗಿ ಇರಿಸಿ ಕೊಂಡಿದ್ದಾರೆ. ಆದರೆ ಕೃಷಿಯೇ ಜೀವ ನಾದಾರವಾಗಿಸಿಕೊಂಡಿದ್ದ ರೈತರ ಸಾವಿರಾರು ಎಕರೆ ಭೂಮಿಗೆ ರಾಜ್ಯ ಅರಣ್ಯ ಇಲಾಖೆ ಏಕಾಏಕಿ ಗಡಿ ಗುರುತಿಸಿ, ಇದು ಮೈಸೂರು ಮಹಾರಾಜರು ಸರ್ಕಾರಕ್ಕೆ ನೀಡಿರುವ ಭೂಮಿ, ಹೀಗಾಗಿ ರೈತರು ಉಳುಮೆ ಸೇರಿದಂತೆ ಜಮೀನಿನಲ್ಲಿರುವ ಮರಗಳನ್ನು ಕಟಾವು ಮಾಡದಂತೆ ಸೂಚಿಸಿದೆ.
ಸರ್ಕಾರ ನೀತಿಯಿಂದ ಆತಂಕಗೊಂಡ ಗ್ರಾಮಸ್ಥರು ರಾಜ್ಯ ಅರಣ್ಯ ಇಲಾಖೆ ನಡೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ತನ್ನ ನಿಲುವನ್ನು ಕೂಡಲೇ ಹಿಂಪಡೆಯದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv