ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 15 ತಿಂಗಳಿಂದ ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಡಿ.11ರಂದು ಪ್ರತಿಭಟನೆ ಅಂತಿಮಗೊಳಿಸಿ ತಮ್ಮ ಊರುಗಳಿಗೆ ತೆರಳುವುದಾಗಿ ರೈತ ನಾಯಕರು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‍ಪಿ) ಕಾನೂನು ಖಾತರಿ, ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ದಾಖಲಿಸಿರುವ ಅಪರಾಧ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದ್ದರು. ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭರವಸೆಯ ಹೊಸ ಪ್ರಸ್ತಾಪಗಳನ್ನು ರೈತರಿಗೆ ನೀಡಿತ್ತು. ಅದನ್ನು ಒಪ್ಪಿರುವ ರೈತರು ಪ್ರತಿಭಟನೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ
ರೈತರು ತಮ್ಮ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಘೋಷಿಸಿದ್ದಾರೆ. ತಮ್ಮ ಊರುಗಳಿಗೆ ವಾಪಸ್ಸಾಗಲು ಸಿದ್ಧತೆ ನಡೆಸಿದ್ದು, ಇಂದು ಸಂಜೆ 5.30ರ ಸಮಯಕ್ಕೆ ವಿಜಯದ ಪ್ರಾರ್ಥನೆ ಮಾಡಲಿದ್ದಾರೆ. ಅಲ್ಲದೇ ಡಿ.11ರಂದು ಟಿಕ್ರಿ ಮತ್ತು ಸಿಂಘು ಗಡಿ ಭಾಗಗಳಲ್ಲಿ ವಿಜಯದ ಮೆರವಣಿಗೆ ನಡೆಸಲಿದ್ದಾರೆ. ನಂತರ ಡಿ.15ರಂದು ದೆಹಲಿಯಲ್ಲಿ ಮತ್ತೊಂದು ಸಭೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿದೆ.
6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರ ನಿನ್ನೆ ಲಿಖಿತ ಭರವಸೆಯ ಪ್ರಸ್ತಾಪವನ್ನು ಎಸ್‌ಕೆಎಂ ಮುಖಂಡರಿಗೆ ನೀಡಿದೆ. ಆದ್ದರಿಂದ ರೈತ ಸಂಘಟನೆಗಳು ಪ್ರತಿಭಟನೆ ಹಿಂತೆಗೆದುಕೊಳ್ಳಲು ನಿರ್ಧರಿಸಿವೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಮಿತಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ತಜ್ಞರು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ರೈತ ಸಂಘಟನೆಗಳ ಪ್ರಮುಖರನ್ನು ಒಳಗೊಂಡಿರುತ್ತದೆ.