ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಹೋರಾಟ ಆರಂಭಿಸಿರುವ ರೈತರಿಗೆ (Farmers Protest) ಕೇಂದ್ರ ಸರ್ಕಾರ ಮಣಿದಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆ (Lok Sabha Election 2024 )ಹೊತ್ತಲ್ಲಿ ರೈತರ ಪ್ರತಿಭಟನೆ ದೊಡ್ಡದು ಮಾಡದಿರಲು ನಿರ್ಧರಿಸಲು ಮೋದಿ ಸರ್ಕಾರ ಸರ್ಕಾರಿ ಅಧಿಕಾರಿಗಳ ಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಸಮಿತಿಯು ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕಾರ್ಯ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲಿದೆ. ಸಮಿತಿಯು ಚರ್ಚೆಗಾಗಿ ರೈತ ಸಂಘಟನೆಗಳ ಪ್ರತಿನಿಧಿಗಳ ಹೆಸರನ್ನು ಸಹ ಕೇಳಬಹುದು. ರೈತರ ಬೇಡಿಕೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚೆ ಅಗತ್ಯ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ನಾನು ಲೋಕಸಭೆಗೆ ನಿಲ್ಲೋದಿಲ್ಲ: ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ
ರೈತರಿಗಾಗಿ ರಚಿಸಲಾದ ಕಳೆದ ಸಮಿತಿಯಲ್ಲಿ ಸಂಜಯ್ ಅಗರವಾಲ್ ನೇತೃತ್ವದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಪ್ರತಿನಿಧಿಗಳ ಹೆಸರನ್ನು ನೀಡಿಲ್ಲ ಎನ್ನುವುದನ್ನು ಸರ್ಕಾರ ಗಮನಿಸಿದೆ. ಪ್ರಸ್ತುತ ಪಂಜಾಬ್-ಹರಿಯಾಣ ಗಡಿಯ ಶಂಭು ಮತ್ತು ಖಾನೌರಿ ಪಾಯಿಂಟ್‍ಗಳಲ್ಲಿ ಬೀಡುಬಿಟ್ಟಿರುವ ರೈತರು ಎಂಎಸ್‍ಪಿಗೆ ಕಾನೂನು ಖಾತರಿ ನೀಡುವ ಬಗ್ಗೆ ಕೇಂದ್ರವು ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಿಸಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಗೆ ಒಂದು ದಿನ ಮೊದಲು ಈ ಬೇಡಿಕೆ ಬಂದಿದೆ. ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ರೈತ ಮುಖಂಡರು ಭಾನುವಾರ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಸಭೆ ನಡೆದಿತ್ತು. ಈ ವೇಳೆ ಮಾತುಕತೆ ವಿಫಲವಾಗಿತ್ತು. ಇದನ್ನೂ ಓದಿ: ಬಿಜೆಪಿಯವ್ರು, ಹಿಂದುತ್ವವಾದಿಗಳು ಹೇಳುವ ಗ್ರಂಥ ನಮ್ಮದಲ್ಲ.. ಸಂವಿಧಾನವೇ ನಮ್ಮ ಧರ್ಮಗ್ರಂಥ: ಸಿದ್ದರಾಮಯ್ಯ