ಧಾರವಾಡ: ವಿದ್ಯುತ್ ತಂತಿ ತಗುಲಿ ರೈತರಿಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಬ್ಬು ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕ್ಯಾರಕೊಪ್ಪ (52) ಹಾಗೂ ಚನ್ನಬಸಪ್ಪ ಧೂಳಿಕೊಪ್ಪ (45) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ದುರ್ದೈವಿಗಳು.
ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಗ್ಗೆ ರೈತರು ಹೆಸ್ಕಾಂಗೆ ದೂರನ್ನ ನೀಡಿದ್ದರು. ದೂರು ನೀಡಿದ್ದರೂ ಸಿಬ್ಬಂದಿ ದುರಸ್ತಿ ಮಾಡಿರಲಿಲ್ಲ.
ಘಟನೆ ನಡೆದ ನಂತರ ಆಕ್ರೋಶಿತ ರೈತರು ಕಲಘಟಗಿಯ ಹೆಸ್ಕಾಂ ಕಚೇರಿಗೆ ನುಗ್ಗಿ ಕಿಟಕಿ ಹಾಗೂ ಕುರ್ಚಿಗಳನ್ನ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಕೂಡಾ ನಡೆಸಲಾಗಿದೆ.
ಇದೇ ವೇಳೆ ಸಾವನ್ನಪ್ಪಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.