ರಾಮನಗರ: ರಾಜ್ಯದಲ್ಲಿ ಜಾತಿಗೊಂದು ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ವರ್ಷಕೊಮ್ಮೆಯಾದರೂ ಅನ್ನದಾತರನ್ನ ನೆನೆಯುವ ಕಾಯಕವನ್ನ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಮುಂದಿನ ವರ್ಷದಿಂದ ರೈತ ದಿನವನ್ನು ಆಚರಿಸಬೇಕು ಎಂದು ರಾಮನಗರದ ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತರ ದಿನಾಚರಣೆಯನ್ನ ಜಿಲ್ಲೆಯ ಹಲವೆಡೆ ಸಂಭ್ರಮದಿಂದ ರೈತರು ಆಚರಿಸಿದ್ರು. ರಾಮನಗರದ ಎಪಿಎಂಸಿ ಮಾರುಕಟ್ಟೆ, ರೇಷ್ಮೆಗೂಡು ಮಾರುಕಟ್ಟೆ, ಮಾಗಡಿಯ ಕೆಂಪೇಗೌಡ ಕೋಟೆ ಆವರಣ, ಹಾರೋಹಳ್ಳಿ ಸೇರಿದಂತೆ ಹಲವೆಡೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆಚರಿಸಿದರು.
Advertisement
Advertisement
ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ ಹಾಗೂ ಜಯ ಕರ್ನಾಟಕ ಸಂಘಟನೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ರೈತ ದಿನಾಚರಣೆಯಲ್ಲಿ ರೈತ ಮುಖಂಡ ಲಕ್ಷ್ಮಣ ಸ್ವಾಮಿ ಅವರು ಮಾತನಾಡಿ, ವಿಶ್ವದಲ್ಲಿ ಬೇರೆಲ್ಲಾ ದಿನಾಚರಣೆಗಳಿಗಿಂತ ರೈತ ದಿನಾಚರಣೆಗೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕಿದೆ. ರೈತ ದೇಶ ಮಾತ್ರವಲ್ಲ, ಮನುಕುಲದ ಬೆನ್ನೆಲುಬು. ಇದೇ ಕಾರಣಕ್ಕೆ ರೈತ ಬಿತ್ತದಿದ್ದರೆ ಬಿಕ್ಕುವುದು ಜಗವೆಲ್ಲಾ ಎಂಬ ನಾಣ್ಣುಡಿ ಬಂದಿದೆ. ಆತನ ಶ್ರಮದಿಂದಲೇ ನಾವೆಲ್ಲಾ ಇಂದು ನಿರಂತರವಾಗಿ ಆಹಾರ ದಕ್ಕಿಸಿಕೊಳ್ಳುತ್ತಿದ್ದೇವೆ. ಬೆಳೆ ಬೆಳೆಯುವ ರೈತರನ್ನು ಹಾಗೂ ಅವರ ಕುಟುಂಬವನ್ನು ಗೌರವ ಭಾವದಿಂದ ಕಾಣಬೇಕು. ಕೃಷಿಕರ ನೆರವಿಗೆ ವಿಶಿಷ್ಟ ಯೋಜನೆ ರೂಪಿಸಿ ನೆರವಾಗಬೇಕು. ಸಾಲಮನ್ನಾ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಹೊಸ ಸಾಲ ವಿತರಿಸಬೇಕು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರ ಏಳಿಗೆಗೆ ಬ್ಯಾಂಕ್‍ಗಳು ಕೈಜೋಡಿಸಬೇಕು ಎಂದರು.
Advertisement
Advertisement
ಬೆಂಗಳೂರು ವಲಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್ ಅವರು ಮಾತನಾಡಿ, ಸಮಗ್ರ ಕೃಷಿಯಲ್ಲಿ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳಲು ರೈತರೇ ವಿಜ್ಞಾನಿಗಳಾಬೇಕು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಎರಡು ಸಾವಿರ ಅಡಿ ತಲುಪಿದರೂ ರೇಷ್ಮೆ ಮತ್ತು ಮಾವು ಬೆಳೆಯಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಕುಮಾರಣ್ಣ ಅಭಿಮಾನಿಗಳ ಬಳಗದಿಂದ ತೆಂಗಿನ ಸಸಿಗಳನ್ನು ವಿತರಣೆ ಮಾಡುವ ಮೂಲಕ ರೈತರಿಗೆ ಶುಭಾಶಯ ಕೋರಿ, ಮಾರುಕಟ್ಟೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ರೈತರ ನೆರವಿಗೆ ನಿಲ್ಲುವ ರೈತ ಮುಖಂಡರು ಹಾಗೂ ಮಾದರಿ ರೈತರನ್ನು ಸನ್ಮಾನಿಸಲಾಯಿತು.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ, ಹಾಲಿ ಶಾಸಕ ಎ.ಮಂಜುನಾಥ್ ಸಹ ಭಾಗಿಯಾಗಿ, ಪ್ರಗತಿಪರ ರೇಷ್ಮೆ ಬೆಳೆಗಾರರನ್ನು, ರೈತ ಮುಖಂಡರನ್ನ, ಉದೋನ್ಮುಖ ರೈತರು, ಮಾದರಿ ರೈತರನ್ನ ಸನ್ಮಾನಿಸಿದರು.