– ಹತ್ತಿ ಮಾರಾಟ ಮಾಡಲು ಪರದಾಟ
ಯಾದಗಿರಿ: ಲಾಕ್‍ಡೌನ್ ಸಡಿಲಿಕೆ ಆದರೂ ರೈತರ ಗೋಳು ಮಾತ್ರ ತಪ್ಪಿಲ್ಲ. ಇದೀಗ ಹತ್ತಿ ಮಾರಾಟ ಮಾಡಲು ಯಾದಗಿರಿ ರೈತರು ಪರದಾಟ ನಡೆಸುತ್ತಿದ್ದಾರೆ.
ರೈತರಿಂದ ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿ ಮಾಡಲು ಕೇಂದ್ರ ಸರ್ಕಾರ ಇಂಗಿತ ಹೊಂದಿದೆ. ಹೀಗಾಗಿ ಜಿಲ್ಲೆಯ ಶಹಾಪುರದ ಮದ್ರಿಕಿ ಹತ್ತಿರ ಖಾಸಗಿ ಕಾಟನ್ ಮೀಲ್‍ನಲ್ಲಿ ಭಾರತೀಯ ಹತ್ತಿ ನಿಗಮ ಖರೀದಿ ಕೇಂದ್ರ ಆರಂಭಿಸಿದೆ. ಹತ್ತಿ ಮಾರಾಟ ಮಾಡಲು ನೂರಾರು ರೈತರು ಮುಂದಾಗಿದ್ದಾರೆ. ಆದರೆ ಸಾಮಾಜಿಕ ಅಂತರ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಅಧಿಕಾರಿಗಳು ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 600ಕ್ಕೂ ಅಧಿಕ ರೈತರು ಭಾರತೀಯ ಹತ್ತಿ ನಿಗಮದಲ್ಲಿ ಹತ್ತಿ ಮಾರಾಟ ಮಾಡಲು ಸಿದ್ಧರಿದ್ದಾರೆ. ಹತ್ತಿ ನಿಗಮ ಸಹ ಮೇ ತಿಂಗಳು ಮುಗಿಯುವದರೊಳಗೆ ಹತ್ತಿ ಖರೀದಿ ಮಾಡಲು ರೆಡಿಯಿದೆ. ಆದರೆ APMC ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ದಿನಕ್ಕೆ ಹತ್ತು ಜನರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ. ಇದರಿಂದ ಬರೀ ಹತ್ತಿ ಮಾರಾಟ ಪ್ರಕ್ರಿಯೆಗೆ ಇನ್ನೂ ನಾಲ್ಕೈದು ತಿಂಗಳು ಬೇಕಾಗುತ್ತದೆ. ಇದರಿಂದ ರೈತರು ಅಸಮಾಧಾನಗೊಂಡಿದ್ದಾರೆ.
ಮತ್ತೆ ಜೂನ್‍ನಲ್ಲಿ ಬಿತ್ತನೆ ಕಾರ್ಯ ಆರಂಭಗೊಳಲಿದೆ. ಹೀಗಾಗಿ ಬೀಜ ಖರೀದಿಗೆ, ಗೊಬ್ಬರಕ್ಕೆ ಹಣದ ಅವಶ್ಯಕತೆಯಿದೆ. ಆದರೂ ಅಧಿಕಾರಿಗಳು ರೈತರ ಬಗ್ಗೆ ಚಿಂತಿಸುತ್ತಿಲ್ಲ. ಹತ್ತಿ ನಿಗಮ ಹತ್ತಿ ಖರೀದಿ ಮಾಡಲು ಸಿದ್ಧವಿದ್ದರೂ APMC ಮಾತ್ರ ನಿರಾಶಕ್ತಿ ಹೊಂದಿದೆ.