ಗದಗ: ಲೋಡ್ ಶೆಡ್ಡಿಂಗ್‍ನಿಂದಾಗಿ ಬೇಸತ್ತ ರೈತರು ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಹಗಲು ವೇಳೆ ಮೂರು ಗಂಟೆ ಹಾಗೂ ರಾತ್ರಿ ವೇಳೆ ಮೂರು ಗಂಟೆ ತ್ರಿಫೇಸ್ ಕರೆಂಟ್ ನೀಡುತ್ತಾರೆ. ಲೋಡ್ ಶೆಡ್ಡಿಂಗ್ ನಿಂದಾಗಿ ಬೆಳೆದ ಬೆಳೆಗಳು ಕೈಗೆ ಬರುತ್ತಿಲ್ಲ. ಇದರಿಂದ ಮತ್ತಷ್ಟು ಸಾಲದ ಸುಳಿಗೆ ಸೀಲುಕುವಂತಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟಿಸಿದರು.
Advertisement
ಹಗಲು ವೇಳೆ ಕನಿಷ್ಟ 10 ಗಂಟೆ ನಿರಂತರ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದ್ದು, ಕೂಡಲೇ ಸ್ಥಳಕ್ಕೆ ಜಿಲ್ಲೆಯ ಹೆಸ್ಕಾಂ ಅಧಿಕಾರಿಗಳು ಆಗಮಿಸಿ, ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪಟ್ಟು ಹಿಡಿದರು. ರೈತರು ಮುಂಡರಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಪೊಲೀಸರು ತಡೆಯುವ ಪ್ರಯತ್ನ ಕೂಡ ಮಾಡಿದ್ದರು. ಈ ವೇಳೆ ರೈತರು ಹಾಗೂ ಹೆಸ್ಕಾಂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಕೂಡಲೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement
ಹಗಲು ವೇಳೆ ಕನಿಷ್ಟ 10 ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿದ ರೈತರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇದು ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.