– ಲೋಕಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರದ ನಡೆ ಏನು?
– ರೈತರ ಪ್ರಮುಖ ಬೇಡಿಕೆಗಳು ಈಡೇರುತ್ತಾ?
ಅದು 2020-21 ರ ಸಂದರ್ಭ. ಕೇಂದ್ರ ಸರ್ಕಾರಿ ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ದಂಗೆಯೆದ್ದಿದ್ದರು. ವರ್ಷಪೂರ್ತಿ ನಡೆದ ಪ್ರತಿಭಟನೆ ಐತಿಹಾಸಿಕ ಎಂಬಂತಿತ್ತು. ದೆಹಲಿ ಗಡಿಭಾಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರ ದಂಡು ಬೀಡಿಬಿಟ್ಟಿತ್ತು. ಸಾವಿರಾರು ಕಿಮೀ ದೂರದಿಂದ ಪ್ರಯಾಣಿಸಿದ್ದ ವಾಹನಗಳನ್ನೇ ಟೆಂಟ್ ಮಾಡಿಕೊಂಡಿದ್ದರು. ಪೊಲೀಸರು ಹಾಕಿದ್ದ ಚಕ್ರವ್ಯೂಹ ಭೇದಿಸಿ ದೆಹಲಿಗೆ ಮುತ್ತಿಗೆ ಹಾಕಿದ್ದರು. ಗಣರಾಜ್ಯೋತ್ಸವದಂದು ಪೊಲೀಸರೊಂದಿಗೆ ಘರ್ಷಣೆ ಮಾಡಿಕೊಂಡು ಕೆಂಪುಕೋಟೆಗೆ ನುಗ್ಗಿ ನಿಶಾನ್ ಸಾಹಿಬ್ ಧ್ವಜ ಹಾರಿಸಿದರು. ರೈತರ ಮುಂದೆ ಶರಣಾದ ಕೇಂದ್ರ ಸರ್ಕಾರ ತಾನು ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತು.
Advertisement
ಕೇಂದ್ರದ 3 ಕೃಷಿ ಕಾನೂನುಗಳ ವಿರುದ್ಧ ಎರಡು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸಂಚಲನ ಮೂಡಿಸಿದ್ದ ಅನ್ನದಾತರು ಈಗ ಮತ್ತೆ ಬೀದಿಗಿಳಿದಿದ್ದಾರೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ರೈತರು ದಂಗೆ ಎದ್ದಿರುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತರು – ‘ದೆಹಲಿ ಚಲೋ’ ಮುಂದುವರಿಸುವುದಾಗಿ ಘೋಷಣೆ
Advertisement
Advertisement
‘ದೆಹಲಿ ಚಲೋ’ (Delhi Chalo) ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಪಂಜಾಬ್-ಹರಿಯಾಣದ ಶುಂಭು ಗಡಿಯಲ್ಲಿ ಬ್ಯಾರಿಕೇಡ್ ಕಿತ್ತು ಹಾಕಿ ನುಗ್ಗಲು ಯತ್ನಿಸಿದ್ದರು. ಭಾರಿ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದರು. ಇದ್ಯಾವುದಕ್ಕೂ ಜಗ್ಗದ ರೈತರು ಗಡಿ ಪ್ರವೇಶಿಸಲು ಯತ್ನಿಸಿದ್ದಾರೆ. ಇತ್ತ ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ರೈತ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಫಲ ಕೊಟ್ಟಿಲ್ಲ. ಇದರಿಂದ ಸ್ಥಳೀಯ ಜನಸಾಮಾನ್ಯರು ಪರದಾಡುವಂತಾಗಿದೆ.
Advertisement
ಬೇಡಿಕೆಗಳು ಮತ್ತು ನಾಯಕತ್ವ ಎರಡರಲ್ಲೂ, 2024 ರ ಪ್ರತಿಭಟನೆಯು 2020-21 ರಲ್ಲಿ ನಡೆದಿದ್ದ ವರ್ಷಪೂರ್ತಿ ಆಂದೋಲನಕ್ಕಿಂತ ಬಹಳ ಭಿನ್ನವಾಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒಂದು ವರ್ಷದ ವರೆಗೆ ದೆಹಲಿಯಲ್ಲೇ ನೆಲೆನಿಂತು ಪ್ರತಿಭಟಿಸಿ ರೈತರು ಯಶಸ್ವಿಯಾಗಿದ್ದರು. ಆಗ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಈಗ ಮತ್ತೆ ಕೇಂದ್ರದ ವಿರುದ್ಧ ರೈತರು ದಂಗೆಯೆದ್ದಿದ್ದಾರೆ.
ಏನಿದು ರೈತರ ಹೊಸ ಪ್ರತಿಭಟನೆ?
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 150 ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ 250 ಕ್ಕೂ ಹೆಚ್ಚು ರೈತ ಸಂಘಟನೆಗಳು ಪಂಜಾಬ್‌ನಿಂದ ಸಂಘಟಿತವಾಗಿ ಪ್ರತಿಭಟನೆ ನಡೆಸುತ್ತಿವೆ. ಎರಡು ವರ್ಷಗಳ ಹಿಂದೆ ರೈತರಿಗೆ ನೀಡಿದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿಸಲು ಎರಡೂ ವೇದಿಕೆಗಳು ಡಿಸೆಂಬರ್ 2023 ರ ಕೊನೆಯಲ್ಲಿ ‘ದೆಹಲಿ ಚಲೋ’ ಕರೆ ನೀಡಿದ್ದವು.
ಪೊಲೀಸರೊಂದಿಗೆ ರೈತರ ಘರ್ಷಣೆ
ಸಾವಿರಾರು ಸಂಖ್ಯೆಯಲ್ಲಿ ಗಡಿ ಭಾಗಗಳನ್ನು ರೈತರು ಪ್ರವೇಶಿಸಿದರು. ಪ್ರತಿಭಟನಾನಿರತರನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಬ್ಯಾರಿಕೇಡ್‌ಗಳು, ಮೊಳೆಗಳು, ಭಾರೀ ಉಪಕರಣಗಳೊಂದಿಗೆ ರೈತರಿಗೆ ಬೇಲಿ ಹಾಕಿದ್ದಾರೆ. ಗಡಿ ನುಗ್ಗಲು ಯತ್ನಿಸಿದ ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ರೈತರ ಪ್ರತಿಭಟನೆಯಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಈಗಾಗಲೇ ನಾಲ್ಕು ಸುತ್ತಿನ ಮಾತುಕತೆಯಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ.
2020-21 ರ ನಾಯಕರು ಮತ್ತೆ ಸಕ್ರಿಯ?
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) 2022 ರ ಜುಲೈನಲ್ಲಿ ಮೂಲ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೇರ್ಪಟ್ಟಿತು. ಇದರ ಜೊತೆ ಪಂಜಾಬ್ ಮೂಲದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಿಧುಪುರ ಫಾರ್ಮ್‌ನ ಅಧ್ಯಕ್ಷ ಜಗಜಿತ್ ಸಿಂಗ್ ದಲ್ಲೆವಾಲ್ ಪ್ರಮುಖ ಸಂಘಟನೆ ಸೇರಿಕೊಂಡಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿವೆ. ಬಿಕೆಯು ಕೂಡ ಪ್ರಮುಖ ಸಂಘಟನೆಯ ನಾಯಕರೊಂದಿಗೆ ಭಿನ್ನಾಭಿಪ್ರಾಯಗಳ ನಂತರ ಎಸ್‌ಕೆಎಂನಿಂದ ಬೇರ್ಪಟ್ಟಿತ್ತು. ಪ್ರಸ್ತುತ ಪ್ರತಿಭಟನೆಯಲ್ಲಿರುವ ಇತರ ಸಂಘಟನೆಯಾದ ಕೆಎಂಎಂ ಅನ್ನು ಪಂಜಾಬ್ ಮೂಲದ ಯೂನಿಯನ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಸಂಚಾಲಕ ಸರ್ವಾನ್ ಸಿಂಗ್ ಪಂಧೇರ್ ರಚಿಸಿದ್ದಾರೆ. ಈ ಸಂಘಟನೆ ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಮುಖ ಪ್ರತಿಭಟನೆಗೆ ಸೇರಿರಲಿಲ್ಲ. ಬದಲಿಗೆ ದೆಹಲಿ ಗಡಿಯಲ್ಲಿ ಕುಂಡ್ಲಿಯಲ್ಲಿ ಪ್ರತ್ಯೇಕ ವೇದಿಕೆ ಸ್ಥಾಪಿಸಿತ್ತು. ಹಿಂದಿನ ಪ್ರತಿಭಟನೆ ಕೊನೆಗೊಂಡ ನಂತರ ಕೆಎಂಎಸ್‌ಸಿ ತನ್ನ ನೆಲೆಯನ್ನು ವಿಸ್ತರಿಸಲು ಆರಂಭಿಸಿತು. ಜನವರಿ ಅಂತ್ಯಕ್ಕೆ ದೇಶಾದ್ಯಂತ 100 ಕ್ಕೂ ಹೆಚ್ಚು ಒಕ್ಕೂಟಗಳನ್ನು ಒಳಗೊಂಡಿರುವ ಕೆಎಂಎಂ ರಚಿಸಿರುವುದಾಗಿ ಘೋಷಿಸಿತು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಚರ್ಚೆ, ಐದು ಬೆಳೆಗೆ ಬೆಂಬಲ ಬೆಲೆ ಖಾತರಿ ಕಾನೂನು ಪ್ರಸ್ತಾವನೆ
ಕೃಷಿ ಕಾನೂನುಗಳ ವಿರುದ್ಧ 2020-21 ಆಂದೋಲನದ ನೇತೃತ್ವ ವಹಿಸಿದ್ದ ಭಾರತದ 500 ಕ್ಕೂ ಹೆಚ್ಚು ರೈತ ಸಂಘಗಳ ಪ್ರಮುಖ ಒಕ್ಕೂಟವಾಗಿದ್ದ ಎಸ್‌ಕೆಎಂ ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಪಂಜಾಬ್‌ನಲ್ಲಿ, ದೊಡ್ಡದಾದ, BKU ಉಗ್ರನ್ ಸೇರಿದಂತೆ 37 ರೈತ ಸಂಘಗಳು SKM ನ ಭಾಗವಾಗಿದೆ. ಫೆಬ್ರವರಿ 16 ರಂದು ಗ್ರಾಮೀಣ ಭಾರತ್ ಬಂದ್‌ಗೆ ಎಸ್‌ಕೆಎಂ ತನ್ನದೇ ಆದ ಕರೆ ನೀಡಿದೆ.
ರೈತರ ಬೇಡಿಕೆಗಳೇನು?
* ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
* 2013ರ ಭೂಸ್ವಾಧೀನ ಕಾಯಿದೆಯ ಅನುಷ್ಠಾನ. ಸ್ವಾಧೀನಕ್ಕೆ ಮುನ್ನ ರೈತರಿಂದ ಲಿಖಿತ ಒಪ್ಪಿಗೆ ಮತ್ತು ಜಿಲ್ಲಾಧಿಕಾರಿ ನಿಗದಿಪಡಿಸಿರುವ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕು.
* ಅಕ್ಟೋಬರ್ 2021 ರ ಲಖಿಂಪುರ ಖೇರಿ ಹತ್ಯೆಯ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.
* ಭಾರತವು ವಿಶ್ವ ವ್ಯಾಪಾರ ಸಂಸ್ಥೆಯಿಂದ (ಡಬ್ಲ್ಯೂಹೆಚ್‌ಒ) ಹಿಂದೆ ಸರಿಯಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಫ್ರೀಜ್ ಮಾಡಬೇಕು.
* ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು.
* ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕೊಡಬೇಕು.
* ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ರದ್ದುಗೊಳಿಸಬೇಕು.
* ವರ್ಷಕ್ಕೆ ಮನ್ರೇಗಾ ಅಡಿಯಲ್ಲಿ 8.200 (100 ಬದಲಿಗೆ) ದಿನಗಳ ಉದ್ಯೋಗ, ರೂ. 700 ದೈನಂದಿನ ವೇತನ ಮತ್ತು ಈ ಯೋಜನೆಯನ್ನು ಕೃಷಿಯೊಂದಿಗೆ ಜೋಡಿಸಬೇಕು.
* ನಕಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳ ಮೇಲೆ ಕಟ್ಟುನಿಟ್ಟಾದ ನಿಯಮ ಅಳವಡಿಸಬೇಕು. ಬೀಜದ ಗುಣಮಟ್ಟದಲ್ಲಿ ಸುಧಾರಣೆ ಮಾಡಬೇಕು.
* ಮೆಣಸಿನಕಾಯಿ ಮತ್ತು ಅರಿಶಿನದಂತಹ ಮಸಾಲೆಗಳಿಗಾಗಿ ರಾಷ್ಟ್ರೀಯ ಆಯೋಗ ರಚಿಸಬೇಕು.
* ಜಲ, ಅರಣ್ಯಗಳು ಮತ್ತು ಭೂಮಿಯ ಮೇಲೆ ಸ್ಥಳೀಯ ಜನರ ಹಕ್ಕುಗಳನ್ನು ಖಾತ್ರಿಪಡಿಸುವುದು ರೈತರ ಪ್ರಮುಖ ಬೇಡಿಕೆಗಳಾಗಿವೆ.
ಸರ್ಕಾರದ ಸ್ಪಂದನೆ ಹೇಗಿದೆ?
ಕೆಎಂಎಂ ಮತ್ತು ಎಸ್‌ಕೆಎಂ (ರಾಜಕೀಯೇತರ) ಫೆಬ್ರವರಿ 6 ರಂದು ಕೃಷಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಗಳಿಗೆ ತಮ್ಮ ಬೇಡಿಕೆಗಳ ಕುರಿತು ಇಮೇಲ್ ಮಾಡಿವೆ. ಫೆಬ್ರವರಿ 8 ರಂದು ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು 10 ಸದಸ್ಯರನ್ನು ಭೇಟಿ ಮಾಡಿದರು. ಚಂಡೀಗಢದಲ್ಲಿ ರೈತರ ನಿಯೋಗ ಸಭೆಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂಯೋಜಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಅವಿರೋಧ ಆಯ್ಕೆ
ಎಎಪಿ & ಕಾಂಗ್ರೆಸ್ ಬೆಂಬಲ
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ರೈತರಿಗೆ ಬೆಂಬಲ ನೀಡಿವೆ. 26 ರೈತ ಮುಖಂಡರ ನಿಯೋಗವು ಮೂವರು ಸಚಿವರನ್ನು ಭೇಟಿಯಾದ ಎರಡನೇ ಸಭೆಯಲ್ಲಿ (ಸೋಮವಾರ) ಮಾನ್ ಭಾಗಿಯಾಗಿರಲಿಲ್ಲ. ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಇಲ್ಲಿಯವರೆಗೆ ಮೌನವಾಗಿದೆ.
ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತರು!
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ್ದಾರೆ. ಕೇಂದ್ರ ಮತ್ತು ‘ದೆಹಲಿ ಚಲೋ’ ರೈತರ ನಡುವೆ ಈವರೆಗೆ 4 ಸುತ್ತಿನ ಮಾತುಕತೆಯಾಗಿದ್ದು, ಪ್ರಯೋಜನವಾಗಿಲ್ಲ. ರೈತರು ಬುಧವಾರದಿಂದ ದೆಹಲಿ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಡುವ ಘೋಷಣೆ ಮಾಡಿದ್ದಾರೆ.
2021 ರಲ್ಲಿ ಏನಾಗಿತ್ತು?
ಕೆಂಪುಕೋಟೆಗೆ ರೈತರ ಮುತ್ತಿಗೆ: ಗಣರಾಜ್ಯೋತ್ಸವ ದಿನದಂದು 1000 ಕ್ಕೂ ಹೆಚ್ಚು ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಅಲ್ಲದೇ ನಿಶಾನ್ ಸಾಹಿಬ್ ಮತ್ತು ಕಿಸಾನ್ ಬಾವುಟ ಹಾರಿಸಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಏರ್ಪಟ್ಟಿತ್ತು.
702 ರೈತರು ಸಾವು!
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಸುಮಾರು 702 ರೈತರು ಸಾವಿಗೀಡಾಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿತ್ತು. ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಮೂವರು ರೈತರು ದುರ್ಮರಣಕ್ಕೀಡಾಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಇಬ್ಬರು ಹೃದಯ ಸ್ತಂಭನ ಹಾಗೂ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ – ಯುಪಿ ಕೋರ್ಟ್‍ನಿಂದ ರಾಹುಲ್ ಗಾಂಧಿಗೆ ಜಾಮೀನು
ಲಖಿಂಪುರ-ಖೇರಿಯಲ್ಲಿ ಪ್ರಕರಣ
ಕೇಂದ್ರ ರೂಪಿಸಿದ್ದ 3 ಕೃಷಿ ಕಾನೂನುಗಳ ವಿರುದ್ಧ 2021 ರ ಅಕ್ಟೋಬರ್‌ನಲ್ಲಿ ರೈತರು ಲಖಿಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ವಾಹನ ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.