– ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
– ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ
ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.
Advertisement
Advertisement
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.
Advertisement
ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.
Advertisement
ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.
ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.
ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.