ಮಂಡ್ಯ: ರಾಜೀನಾಮೆ ನೀಡಿ ನಾಪತ್ತೆಯಾಗಿರುವ ಶಾಸಕ ನಾರಾಯಣಗೌಡರ ಕ್ಷೇತ್ರದಲ್ಲಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಹೇಮಾವತಿ ಡ್ಯಾಮ್‍ನಿಂದ ನಾಲೆಯಲ್ಲಿ ನೀರು ಬರದ ಕಾರಣ ನೊಂದ ರೈತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಲಂಬಾಡಿ ಕಾವಲು ಗ್ರಾಮದ ನಿವಾಸಿ ಜಯಮ್ಮ(63) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ.
Advertisement
Advertisement
ಜಯಮ್ಮ ಸುಮಾರು ಎರಡು ಎಕರೆ ಜಮೀನು ಹೊಂದಿದ್ದರು. ಕೃಷಿಗಾಗಿ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಆದರೆ ಅದರಲ್ಲಿ ನೀರು ಕಡಿಮೆಯಾಗಿತ್ತು. ಇತ್ತ ಹೇಮಾವತಿ ಅಣೆಕಟ್ಟೆಯಿಂದಲೂ ನಾಲೆಗೆ ನೀರು ಬಾರದ ಕಾರಣ, ಬೆಳೆ ಹಾಕಲಾಗದೇ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದರು.
Advertisement
ಇತ್ತ ನೀರಿಲ್ಲದೆ ಬೆಳೆಯಿಲ್ಲದೆ, ಅತ್ತ ಸಾಲ ಕಟ್ಟಲು ಹಣವಿಲ್ಲದೆ ಮಹಿಳೆ ನೊಂದಿದ್ದರು. ಈ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಜಯಮ್ಮ ಯತ್ನಿಸಿದ್ದರಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.
Advertisement
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಬದಿಗಿಟ್ಟು ಶಾಸಕರು, ಸಚಿವರು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡಿದರೆ ಹೀಗೆ ಸಾಲಬಾಧೆಗೆ ಬಲಿಯಾಗುವ ಜೀವಗಳು ಉಳಿಯುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.