ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಹೂವುಗಳ ದರ ಮಾರುಕಟ್ಟೆಯಲ್ಲಿ ಕುಸಿತವಾಗಿದ್ದು, ಬಟಾನ್ಸ್ ಹೂವುಗಳನ್ನು ಬೆಳೆದ ರೈತ ಮಹಿಳೆಯೊಬ್ಬರು ತೋಟದಲ್ಲಿ ಬಾಡಿಹೋಗುತ್ತಿರುವ ಹೂವುಗಳನ್ನು ಕಂಡು ಕಂಗಾಲಾಗಿದ್ದಾರೆ.
Advertisement
ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಸವಪಟ್ಟಣ ಗ್ರಾಮದ ರೈತ ಮಹಿಳೆಯೊಬ್ಬರು ನಷ್ಟ ಅನುಭವಿಸುತ್ತಿದ್ದಾರೆ. ಅತ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇತ್ತ ತೋಟದಲ್ಲಿಯೇ ಹೂವುಗಳು ಒಣಗುತ್ತಿರೋದನ್ನ ಕಂಡು ರೈತ ಮಹಿಳೆ ಲಕ್ಷ್ಮೀದೇವಮ್ಮ ಕಂಗಾಲಾಗಿದ್ದಾರೆ. ತಮ್ಮ ಜಮೀನಿನಲ್ಲಿ ಬಟಾನ್ಸ್ ಹೂವುಗಳನ್ನು ಲಕ್ಷ್ಮೀದೇವಮ್ಮ ಬೆಳೆದಿದ್ದರು. ಐದು ಲಕ್ಷ ರೂ. ಸಾಲ ಮಾಡಿ ಕಷ್ಟ ಪಟ್ಟು ಹೂವುಗಳನ್ನು ಬೆಳೆದಿದ್ದರು. ಹೂವುಗಳು ಕೂಡ ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ಲಾಕ್‍ಡೌನ್ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವಿನ ದರ ಕುಸಿತಕಂಡಿದ್ದು, ಹೂವುಗಳನ್ನು ಮಾರಾಟ ಮಾಡಿದರೆ ಹಾಕಿದ ಅರ್ಧದಷ್ಟು ಹಣ ಸಿಗೋದಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
Advertisement
Advertisement
ಒಂದೆಡೆ ಬೆಳೆ ನಷ್ಟವಾದರೆ, ಇನ್ನೊಂದೆಡೆ ಸಾಲಗಾರನ ಕಾಟದಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬ ಕಾಲ ಕಳೆಯುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಪೊಲೀಸರ ಭಯ, ಬಾಡಿಗೆ ವಾಹನಗಳು ಸಿಗುತ್ತಿಲ್ಲ. ಇತ್ತ ಹೂವು ಕಟಾವು ಮಾಡಲು ಕೂಲಿ ಆಳುಗಳು ಕೆಲಸಕ್ಕೆ ಬರದಿರೋದು ತೊಂದರೆಯಾಗಿದೆ ಎಂದು ರೈತ ಮಹಿಳೆ ಕಣ್ಣೀರಿಡುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.