ರಾಯಚೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ತೋಟಗಾರಿಕಾ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮೂಸಂಬಿ ಬೆಳೆದ ರೈತನೊಬ್ಬ ಕಷ್ಟಕ್ಕೆ ಸ್ಪಂದಿಸಿದ ನಗರದ ಸ್ನೇಹಿತರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸಿ ಮೂಸಂಬಿ ವ್ಯಾಪಾರಕ್ಕೆ ಸಹಕರಿಸಿದ್ದಾರೆ.
ರಾಯಚೂರು ತಾಲೂಕಿನ ಅಪ್ಪನದೊಡ್ಡಿ ಗ್ರಾಮದ ರೈತ ಗೋವಿಂದ ತನ್ನ ಐದು ಎಕರೆ ಜಮೀನಿನಲ್ಲಿ ಮೂಸಂಬಿ ಬೆಳೆದಿದ್ದರು. ಆದರೆ ಲಾಕ್ ಡೌನ್‍ನಿಂದಾಗಿ ಮಾರಾಟ ಮಾಡಲಾಗದೆ ಪರದಾಡುತ್ತಿದ್ದರು. ಜಿಲ್ಲೆಯಲ್ಲಿ ಹಾಪ್‍ಕಾಮ್ಸ್ ಇಲ್ಲದ ಕಾರಣ ಹಣ್ಣು ಮಾರಾಟ ಕಷ್ಟಕರವಾಗಿತ್ತು.
Advertisement
Advertisement
ರೈತನ ಕಷ್ಟಕ್ಕೆ ಸ್ಪಂದಿಸಿದ ಕೆಲ ಸ್ನೇಹಿತರು ತಮ್ಮ ಸ್ನೇಹಿತರ ವ್ಯಾಟ್ಸಪ್ ಗ್ರೂಪ್‍ಗೆ ಗೋವಿಂದನ ಕಷ್ಟದ ಬಗ್ಗೆ ತಿಳಿಸಿ, 300 ರೂಪಾಯಿಗೆ 10 ಕೆ.ಜಿ ಮೂಸಂಬಿ ಕೊಳ್ಳುವಂತೆ ಮನವಿ ಮಾಡಿ ಮೆಸೇಜ್ ಹಾಕಿದ್ದರು. ಇದರಿಂದ ಒಂದೇ ದಿನ ಎರಡು ಟನ್ ಮೂಸಂಬಿ ಮಾರಿದ್ದಾರೆ. ಈಗಾಗಲೇ ಸಾಕಷ್ಟು ಜನ ಫೋನ್ ಮೂಲಕ ಆರ್ಡರ್ ಮಾಡಿದ್ದು, ಹೋಂ ಡೆಲಿವರಿ ಮಾಡಲಾಗುತ್ತಿದೆ. ಇಂದು ಐದು ಟನ್ ಮಾರಾಟವಾಗುವ ನಿರೀಕ್ಷೆಯಿದೆ.
Advertisement
ರೈತ ಗೋವಿಂದ ಒಟ್ಟು 40 ಟನ್ ಮೂಸಂಬಿ ಬೆಳೆದಿದ್ದರು. ಸಾಲ ಮಾಡಿ ಬೆಳೆದ ಮೂಸಂಬಿ ಕೊಳ್ಳುವವರಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತನ ನೆರವಿಗೆ ಮುಂದಾಗುವಂತೆ ಸ್ನೇಹಿತರು ಮನವಿ ಮಾಡಿದ್ದಾರೆ. ಅಮಿತ್ ದಂಡಿನ್, ರಾಜೇಂದ್ರ, ರಾಕೇಶ್ ರಾಜಲಬಂಡಿ, ವಿನೋದ್, ರಾಮಾಚಾರಿ, ಹಫೀಜುಲ್ಲಾ ಸೇರಿದಂತೆ ಇತರರು ತೋಟಗಾರಿಕೆ ಬೆಳೆ ಬೆಳೆದ ರೈತರ ಸಹಾಯಕ್ಕೆ ಮುಂದಾಗಿದ್ದಾರೆ.