– ಶಾಸಕರಿಂದ 4,300 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ
ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಗಡಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ರೈತರು ಕೂಡ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿಯನ್ನು ಕಾಡಂಚಿನ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಸವನಗುಡಿ ಗ್ರಾಮದ ಬೆಳ್ಳುಳ್ಳಿ ಮಾದೇಶ ತಮ್ಮ ಐದು ಎಕರೆ ಜಮೀನಿನಲ್ಲಿ, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಕರಿಬೇವಿನಸೊಪ್ಪು ಬೆಳೆದಿದ್ದರು. ಆದರೆ ಈ ತರಕಾರಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ತರಕಾರಿ ಹೊಲದಲ್ಲೇ ಹಾಳಾಗುವ ಬದಲು ಸಂಕಷ್ಟದಲ್ಲಿರುವ ಕುಟುಂಬಗಳಿಗಾದರೂ ಅನುಕೂಲವಾಗಿಲಿ ಎಂದು ಉಚಿತವಾಗಿ ವಿತರಣೆ ಮಾಡಿದ್ದಾರೆ.
Advertisement
Advertisement
ಮಾದೇಶ್ ತಾವು ಬೆಳೆದ ತರಕಾರಿಯ ಜೊತೆ ಬೇರೆ ರೈತರಿಂದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿಯನ್ನು ಖರೀದಿಸಿದ್ದು, ಅವುಗಳನ್ನು ಪ್ಯಾಕ್ ಮಾಡಿದ್ದಾರೆ. ನಂತರ ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾವಿನಮೂಲೆ, ಯರಗಬಾಳು, ನಲ್ಲಿಕತ್ರಿ, ಉದ್ದಟ್ಟಿ, ಜೀರಿಗೆಗದ್ದೆ, ಮಾವತ್ತೂರು ಮೊದಲಾದ ಗ್ರಾಮಗಳಿಗೆ ಹೋಗಿ, ಮನೆಮನೆಗೆ ಉಚಿತವಾಗಿ ವಿತರಿಸಿದ್ದಾರೆ.
Advertisement
ಜೊತೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಹನೂರು ಠಾಣೆಯ ಪೊಲೀಸ್ ಕುಟುಂಬಗಳಿಗೂ ತರಕಾರಿ ವಿತರಿಸಿದ್ದು, ಜನರ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
Advertisement
ಆಹಾರ ಕಿಟ್ ವಿತರಣೆ:
ಶಾಸಕ ನರೇಂದ್ರ ಗಿರಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಿಸಿದ್ದಾರೆ.
ಮೀಣ್ಯಂ, ಜಲ್ಲಿಪಾಳ್ಯ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮದ ಗಿರಿಜನ ಕುಟುಂಬಕ್ಕೆ ಅಕ್ಕಿ, ಬೆಳೆ, ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಿದ್ದಾರೆ. ಸುಮಾರು 4,300ಕ್ಕೂ ಹೆಚ್ಚು ಗಿರಿಜನ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದು, ಶಾಸಕರ ಕಾರ್ಯಕ್ಕೆ ಗಿರಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.