ಹಾವೇರಿ: ಮೂಲನಕ್ಷೆ ಬಿಟ್ಟು ಹಾವೇರಿ ತಾಲೂಕಿನ ಕಳ್ಳಿಹಾಳ ಮತ್ತು ತೋಟದಯಲ್ಲಾಪುರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರಿಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಜ್ಜಪ್ಪ ಮತ್ತು ಹೊನ್ನಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು. ಕಳೆದ ಎರಡು ವರ್ಷಗಳಿಂದ ಕಳ್ಳಿಹಾಳ ಗ್ರಾಮದ ಬಳಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಮೂಲನಕ್ಷೆಯನ್ನ ತೋರಿಸುತ್ತಿಲ್ಲ. ಮೊದಲು ಸರ್ವೇ ಮಾಡಿದ ಜಮೀನು ಬೇರೆ, ಆದ್ರೆ ಈಗ ಕಾಲುವೆ ನಿರ್ಮಾಣ ಮಾಡುತ್ತಿರೋ ಜಮೀನುಗಳು ಬೇರೆ. ಹಾಗಾಗಿ ಅಧಿಕಾರಿಗಳು ಮೂಲನಕ್ಷೆಯನ್ನ ತೋರಿಸಿ ತುಂಗಾಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಕಳ್ಳಿಹಾಳ ಹಾಗೂ ತೋಟದಯಲ್ಲಾಪುರ ಗ್ರಾಮದ ರೈತರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಇದೂವರೆಗೂ ಯಾರು ಕಾಲುವೆ ನಿರ್ಮಾಣದ ಮೂಲಕ್ಷೆಯನ್ನು ತೋರಿಸಿಲ್ಲ. ಇನ್ನು ಅಸ್ವಸ್ಥಗೊಂಡ ಅಜ್ಜಪ್ಪ ಹಾಗೂ ಹೊನ್ನಪ್ಪ ರೈತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಲ್ಲಾಸ್ಪತ್ರೆ ಮುಂದೆ ರೈತರು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಕಲೆ ಸಮಯ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಇನ್ನಾದ್ರೂ ಅಧಿಕಾರಿಗಳು ಪರಿಶೀಲನೆ ಮಾಡಿ ಮೂಲನಕ್ಷೆ ತೋರಿಸಿ ಕಾಲುವೆ ನಿರ್ಮಾಣ ಮಾಡಬೇಕಿದೆ.