ಚಿಕ್ಕಮಗಳೂರು: ಕಾಡಾನೆ (Elephant) ದಾಳಿಯಿಂದ ರೈತನೊಬ್ಬ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ (N.R Pura) ತಾಲೂಕಿನ ಸೀತೂರು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೆರೆಗದ್ದೆ ಗ್ರಾಮದ ಉಮೇಶ್ (56) ಎಂದು ಗುರುತಿಸಲಾಗಿದೆ. ಸೀತೂರು ಗ್ರಾಮಕ್ಕೆ ಮೂರು ಕಾಡಾನೆಗಳು ಬಂದಿದ್ದು, ಹೊಲ-ಗದ್ದೆ-ತೋಟಗಳ ಮೇಲೆ ದಾಂಧಲೆ ಮಾಡುತ್ತಿದ್ದವು. ಆನೆ ಹಾವಳಿಯಿಂದ ಕಂಗಾಲದ ರೈತರು ಆನೆಗಳನ್ನ ಓಡಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಆನೆಗಳು ಕಂಡ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ (Forest Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರೈತನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾಡಾನೆಗಳನ್ನು ಜಮೀನುಗಳಿಂದ ಓಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.