ಬೀಜಿಂಗ್: ಚೀನಾದ ಶ್ರೀಮಂತ ರೈತನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿಗೆ ಇಂಧನ ಹಾಕಿಸಲು ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಇದೀಗ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ 50 ವರ್ಷದವನಾಗಿದ್ದು, ಈತ ಸಿಚುವಾನ್ ಪ್ರಾಂತ್ಯದ ಲಿನ್ಸುಯಿ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಲಿನ್ಸುಯಿ ಪೊಲೀಸರು ಈ ಕುರಿತು ತನಿಖೆ ಮಾಡಿದ್ದು, ಆಗ ಆರೋಪಿ ವಿಲ್ಲಾದಲ್ಲಿ ವಾಸಿಸುತ್ತಿದ್ದು ಶ್ರೀಮಂತ ರೈತನಾಗಿದ್ದನು. ಜೊತೆಗೆ 2 ಕೋಟಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರಿನ ಮಾಲೀಕನಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
Advertisement
Advertisement
ಆರೋಪಿಗೆ ಕಾರು ಖರೀದಿಸಿದ ಬಳಿಕ ಆರ್ಥಿಕ ತೊಂದರೆ ಎದುರಾಗಿದೆ. ಕೊನೆಗೆ ಸಣ್ಣ-ಪುಟ್ಟ ಅಪರಾಧಗಳನ್ನು ಮಾಡುತ್ತಿದ್ದನು. ಇತ್ತ ತನ್ನ ಕಾರಿಗೆ ಇಂಧನ ಹಾಕಿಸಲು ಹಣ ಇರಲಿಲ್ಲ. ಕೊನೆಗೆ ಆತ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯಲು ಆರಂಭಿಸಿದ್ದಾನೆ. ಆರೋಪಿ ಏಪ್ರಿಲ್‍ನಿಂದ ಕೋಳಿ ಕದಿಯುತ್ತಿದ್ದು, ಬೈಕಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಲಿನ್ಸುಯಿ ಗ್ರಾಮಸ್ಥರು ಸತತವಾಗಿ ತಮ್ಮ ಮನೆಯಲ್ಲಿ ಕೋಳಿ ಕಳ್ಳತನವಾಗುತ್ತಿರುವುದರಿಂದ ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೋಳಿ ಕಳವಿನ ಬಗ್ಗೆ ತನಿಖೆ ಮಾಡಲು ಶುರು ಮಾಡಿದ್ದಾರೆ. ಆ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಲ್ಲಿ ಆರೋಪಿ ಮೋಟಾರ್ ಬೈಕ್ ಮೇಲೆ ಬಂದು ಕೋಳಿ ಕದ್ದು ಹೋಗುತ್ತಿರುವುದು ಸೆರೆಯಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಲು ನಾವು ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗುತ್ತಿದ್ದ ಆತನನ್ನು ಚೇಸ್ ಮಾಡಿದೆವು. ಆದರೆ ಕಾರು ವೇಗವಾಗಿ ಹೋಗುವುದರಿಂದ ಆತ ನಮ್ಮಿಂದ ತಪ್ಪಿಸಿಕೊಂಡಿದ್ದನು. ಆದರೂ ಬೆಂಬಿಡದೆ ಆತನನ್ನು ಚೇಸ್ ಮಾಡಿ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜಾಂಗ್ ಹುವಾ ಹೇಳಿದ್ದಾರೆ.
Advertisement
ಆರೋಪಿ ಮನೆಯಲ್ಲಿ ಕದಿಯಲು ಬಳಸುತ್ತಿದ್ದ ಬೈಕ್ ಹಾಗೂ ಕೋಳಿ, ಬಾತುಕೋಳಿಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ಪಡಿಸಿಕೊಂಡಿದ್ದಾರೆ. ಬಂಧನದ ನಂತರ ಆರೋಪಿ ಕಾರಿಗೆ ಇಂಧನ ತುಂಬಲು ಈ ಕೃತ್ಯ ಎಸಗುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.