ಚಿಕ್ಕಬಳ್ಳಾಪುರ: ರೈತನ ಮೇಲೆ ದ್ವೇಷ ಸಾಧಿಸಿರುವ ಕಿಡಿಗೇಡಿಗಳು ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಮಂಜುನಾಥ್ ಮೂರು ಲೋಡ್ ರಾಗಿ ಒಣ ಹುಲ್ಲನ್ನು ಖರೀದಿಸಿ ಜಮೀನಿನಲ್ಲಿ ಶೇಖರಿಸಿದ್ದರು. ಆದರೆ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಒಂದು ಲೋಡ್ ಹುಲ್ಲಿಗೆ ಸರಿಸುಮಾರು 18 ರಿಂದ 20 ಸಾವಿರ ರೂ. ಬೆಲೆಯಿದೆ. ಒಟ್ಟು ಮೂರು ಲೋಡ್ ಒಣ ಹುಲ್ಲು ಸುಟ್ಟಿದ್ದು, ರೈತನಿಗೆ 50-60 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದೇ ಗ್ರಾಮದವರೇ ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.