ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡಾರಪುರದಲ್ಲಿ ರೈತ ವರನೊಬ್ಬ ತನ್ನ ಭಾವಿ ಪತ್ನಿಯನ್ನು ಮದುವೆ ಮಂಟಪಕ್ಕೆ ಕರೆತರಲು ಆಕೆಯ ಮನೆ ಮುಂದೆ ಹೆಲಿಕಾಪ್ಟರ್ ಕಳುಹಿಸಿದ್ದನು.
ಮಧಾ ತಾಲೂಕಿನ ಉಪ್ಲಾಯ್ ಗ್ರಾಮದಲ್ಲಿ ಈ ಮದುವೆ ನಡೆದಿದ್ದು, ಇಡೀ ಗ್ರಾಮಸ್ಥರಿಗೆ ಆ ಮದುವೆ ಒಂದು ದೊಡ್ಡ ಹಬ್ಬದಂತಾಗಿತ್ತು. ಯಾಕೆಂದರೆ ಇಡೀ ಊರಿನ ಜನ ಹೆಲಿಕಾಪ್ಟರ್ ಬರುವುದನ್ನು ನೋಡಲು ಕಾದು ನಿಂತಿದ್ದರು.
ವಧು ಐಶ್ವರ್ಯ ವಿದ್ಯಾವಂತೆ. ಆದರೆ ಆಕೆ ಕೃಷಿಕನನ್ನು ಮದುವೆಯಾಗಬೆಂದು ನಿರ್ಧರಿಸಿದ್ದಳು. ವರ ನಿತಿನ್ ಕೂಡ ಎಂಬಿಎ ಪದವೀಧರನಾಗಿದ್ದು, ಕೃಷಿಯ ಮೇಲಿನ ಆಸಕ್ತಿಯಿಂದ ಹಳ್ಳಿಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ.
ವರ ನಿತಿನ್ ತನ್ನ ಮದುವೆ ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದನು. ಅದರಂತೆಯೇ ವಧುವಿನ ದಿಬ್ಬಣಕ್ಕೆ ಕುದುರೆ ಗಾಡಿ, ಎತ್ತಿನಗಾಡಿ, ಅಲಂಕೃತ ಕಾರಿನ ಬದಲು ಹೆಲಿಕಾಪ್ಟರನ್ನೇ ಕಳುಹಿಸಲು ನಿರ್ಧರಿಸಿದ್ದು, ಬಾಡಿಗೆ ಹೆಲಿಕಾಪ್ಟರ್ ಅನ್ನು ವಧು ಮನೆಗೆ ಕಳುಹಿಸಿದ್ದನು.
ವರ ಕಳುಹಿಸಿದ್ದ ಹೆಲಿಕಾಪ್ಟರ್ ನಲ್ಲಿ ವಧು ಸಿಂಗಾರಗೊಂಡು ಮದುವೆ ಮಂಟಪಕ್ಕೆ ಆಗಮಿಸಿದರು. ಇವರಿಬ್ಬರ ವಿಶೇಷ ಮದುವೆಗೆ ಇಡೀ ಗ್ರಾಮದವರೇ ಸಾಕ್ಷಿಯಾಗಿದ್ದರು.