ಚಿಕ್ಕೋಡಿ: ಕಳೆದ ಎರಡು ವರ್ಷದಿಂದ ನೆರೆ ಹಾಗೂ ಬರದ ಛಾಯೆಯಿಂದ ರೈತರು ಪಶು ಸಂಗೋಪನೆ ನಿರ್ವಹಣೆ ಕಷ್ಟ ಎಂದು ಕಂಗಾಲಾಗಿದ್ದಾರೆ. ಆದರೆ ಇಲ್ಲೊಬ ರೈತನ ಬಾಳಿನಲ್ಲಿ ಜೋಡಿ ಎತ್ತುಗಳೆ ಬೆಳಕಾಗಿವೆ. ಅಂದರೆ ರೈತ ತನ್ನ ಜೋಡೆತ್ತುಗಳನ್ನು ಬರೋಬ್ಬರಿ 12 ಲಕ್ಷ ರೂ.ಗೆ ಮಾರಾಟ ಮಾಡಿ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ.
ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ಶುಕ್ರವಾರ ಉತ್ತರ ಕರ್ನಾಟಕದ ಪ್ರಸಿದ್ಧ ದನಗಳ ಸಂತೆ ನಡೆಯುತ್ತದೆ. ಈ ದನಗಳ ಸಂತೆಯಲ್ಲಿ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಖುಶಪ್ಪಾ ಕೆಂಪ್ಪಣ್ಣಾ ಹುಲೋಳ್ಳಿ ಅವರಿಗೆ ಸೇರಿದ್ದ ಜೋಡೆತ್ತುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Advertisement
Advertisement
ನಗರದ ದನಗಳ ಸಂತೆಯಲ್ಲಿ ಪಾಲ್ಗೊಂಡ ರಾಸುಗಳಲ್ಲಿ ಇದೇ ಅತ್ಯಂತ ದುಬಾರಿ ಜೋಡೆತ್ತು ಎನ್ನಲಾಗಿದೆ. ಹೀಗಾಗಿ ಈ ಜೋಡೆತ್ತುಗಳು ಸಂತೆಯಲ್ಲಿ ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು. ಈ ಜೋಡೆತ್ತು ದೇಸಿ ತಳಿಯಾಗಿದ್ದು, ಎತ್ತರವಾಗಿ, ದಪ್ಪವಾಗಿ ಬೆಳೆದಿದ್ದವು. ಜೊತೆಗೆ ಈ ಜೋಡೆತ್ತು ಮುಂದೆ ತುಂಬಾ ಉಪಯೋಗದ ಕೆಲಸಕ್ಕೆ ಬರುತ್ತವೆ. ಹೀಗಾಗಿ ಈ ಜೋಡೆತ್ತುಗಳು ದುಬಾರಿ ಬೆಲೆಗೆ ಮಾರಾಟವಾಗಿವೆ.
Advertisement
ಮಹಾರಾಷ್ಟ್ರದ ಪುಣೆ ಹತ್ತಿರದ ಹಳ್ಳಿಯೊಂದರ ರೈತ ಮಹಾದೇವ ನಂದೇಶ್ವರ ಎಂಬವರು ಬರೋಬ್ಬರಿ 12 ಲಕ್ಷ ರೂ.ಕೊಟ್ಟು ಈ ಜೋಡೆತ್ತುಗಳನ್ನು ಖರೀದಿ ಮಾಡಿದ್ದಾರೆ. ಈ ದುಬಾರಿ ಜೋಡೆತ್ತುಗಳನ್ನು ವೀಕ್ಷಿಸಲು ಜನರು ಸಂತೆಯಲ್ಲಿ ಮುಗಿಬಿದ್ದಿದ್ದರು. ಕೆಲವರಂತೂ ಜೋಡೆತ್ತುಗಳ ಮುಂದೆ ನಿಂತುಕೊಂಡು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.