ಕೋಲಾರ: ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ಮಾರಕ ನೀರನ್ನು ಹರಿಸುವುದನ್ನು ನಿಲ್ಲಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಬುಧವಾರ ಯೋಜನೆ ಮೂಲಕ ಕಲುಷಿತ ನೊರೆ ನೀರು ಬಂದ ಹಿನ್ನೆಲೆ ಕೆಸಿ ವ್ಯಾಲಿ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಶುದ್ಧೀಕರಣ ಖಾತ್ರಿ ಇಲ್ಲದ ನೀರನ್ನ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದ್ರು. ಬೆಂಗಳೂರಿನ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಸಂಸ್ಕರಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಹರಿಸಿದ ಪರಿಣಾಮ ಕೋಲಾರ ಜಿಲ್ಲೆಯ ಕೆರೆಗಳನ್ನ ಕೊಳಕು ಮಾಡಲು ಮುಂದಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
Advertisement
Advertisement
ಲಕ್ಷ್ಮಿಸಾಗರ ಕೆರೆಯ ಸುತ್ತಮುತ್ತಲ ಗಾಳಿಯಲ್ಲಿ ವಿಷಕಾರಕ ನೊರೆ ಹಾರಾಡಿದೆ. ಮಲೀನವಾದ ನೊರೆ ನೀರನ್ನು ಹರಿಸಿ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುತ್ತಿದೆ ಎಂಬ ಆತಂಕದಲ್ಲಿ ಜಿಲ್ಲೆಯ ರೈತರಿದ್ದಾರೆ. ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಹಿನ್ನೆಲೆಯಲ್ಲಿ 126 ಕೆರೆಗಳನ್ನು ತುಂಬಿಸುವ 1,400 ಕೋಟಿ ವೆಚ್ಚದಲ್ಲಿ ಕೆ.ಸಿ.ವ್ಯಾಲಿ ಯೋಜನೆಯನ್ನ ರಾಜ್ಯ ಸರ್ಕಾರ ರೂಪಿಸಿದೆ.
Advertisement
ಶುದ್ಧತೆಯ ಖಾತ್ರಿ ನೀಡದೆ ಹಲವು ಆರೋಪ-ಪ್ರತ್ಯಾರೋಪಗಳ ಮಧ್ಯೆ ನೀರು ಹರಿಸುತ್ತಿರುವ ಹಿನ್ನೆಲೆ ಜಿಲ್ಲೆಯ ಜಿನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.