ಬೆಳಗಾವಿ: ಸಿಎಂ ಕುಮಾರಸ್ವಾಮಿ ಅವರು ನೀಡಿದ ಭರವಸೆಯಂತೆ ತಮ್ಮ ಹೋರಾಟವನ್ನು ಹಿಂಪಡೆದಿದ್ದ ಕಬ್ಬು ಬೆಳೆಗಾರರ ಆಕ್ರೋಶ ಹೆಚ್ಚಾಗಿದ್ದು, ಕಬ್ಬು ತುಂಬಿದ ಲಾರಿ ಸಮೇತ ಬೆಳಗಾವಿ ಸುವರ್ಣ ಸೌಧಕ್ಕೆ ಪ್ರವೇಶ ಮಾಡಿ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ.
ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರೈತರು ಕಬ್ಬು ತುಂಬಿಕೊಂಡು ಸುವರ್ಣ ಸೌಧದ ಒಳಗಡೆಯೇ ಲಾರಿಯನ್ನು ನುಗ್ಗಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.
Advertisement
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರೈತ ಮಹಿಳೆಯೊಬ್ಬರು, ಸಿಎಂ ಕುಮಾರಸ್ವಾಮಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದಿದ್ದರಾ? ಸುಮಾರು 200 ವಾಹನಗಳ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಸಿಎಂ ನಾಳೆ ಸುವರ್ಣ ಸೌಧಕ್ಕೆ ಆಗಮಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ರೈತರ ದಿಢೀರ್ ಹೋರಾಟದಿಂದ ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದ ರೈತರನ್ನ ತಡೆಯಲು ಹರಸಾಹಸ ಪಟ್ಟರು. ಸುವರ್ಣಸೌಧದ ಗೇಟ್ ಬಂದ್ ಮಾಡಿದ ಬಳಿಕವೂ ಶಾಂತರಾದ ರೈತರು ಕಲ್ಲಿನಿಂದ ಗೇಟ್ ಬಾಗಿಲು ಮುರಿಯಲು ಯತ್ನಿಸಿದರು. ಅಲ್ಲದೇ ಗೇಟ್ ಕೀ ಯನ್ನು ಪೊಲೀಸರಿಂದ ಕಿತ್ತುಕೊಳ್ಳುವ ಪ್ರಯತ್ನವೂ ನಡೆಯಿತು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಕೂಡ ರೈತರನ್ನು ನಿಯಂತ್ರಣ ಮಾಡಲು ವಿಫಲರಾದರು. ಸುವರ್ಣ ಸೌಧದ ಗೇಟ್ ಮುಂಭಾಗದಲ್ಲೂ ಲಾರಿಗಳನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು, ವಾಹನದಿಂದ ಕಬ್ಬನ್ನು ರಸ್ತೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ಸಿಎಂ ಸಭೆ ನಿಗದಿಯಾಗಿತ್ತು. ಆದರೆ ಶನಿವಾರ ಈ ಸಭೆಯನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಮಂಗಳವಾರ ರಾಜ್ಯದ ಎಲ್ಲ ಕಬ್ಬು ಬೆಳೆಗಾರರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಈ ಸಭೆಯಲ್ಲಿ ಬೆಳಗಾವಿ, ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲೆ ಕಬ್ಬು ಬೆಳೆಗಾರರು ಭಾಗವಹಿಸಲಿದ್ದಾರೆ.