-ಶಾಲೆಯ ಮುಂಭಾಗವೇ ಮಕ್ಕಳಿಗೆ ಪಾಠ
ಹಾಸನ: ಮಾಜಿ ಸಚಿವ, ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದೇ ಬಿಂಬಿತರಾಗಿದ್ದ ಹೆಚ್.ಡಿ.ರೇವಣ್ಣ ಅವರ ಹೊಳೆನರಸೀಪುರ ಕ್ಷೇತ್ರದ ಉಣ್ಣೆನಹಳ್ಳಿಯ ಗ್ರಾಮದ ಮಕ್ಕಳಿಗೆ ಶಾಲಾ ಕಟ್ಟಡವೇ ಇಲ್ಲ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮುಂಭಾಗದಲ್ಲಿಯೇ ಮಕ್ಕಳು ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಬಂದಿದೆ.
Advertisement
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಇದೀಗ ಪುತ್ರ ರೇವಣ್ಣ ಪ್ರತಿನಿಧಿಸುತ್ತಿದ್ದಾರೆ. ಆದ್ರೂ ಉಣ್ಣೆನಹಳ್ಳಿಯ ಗ್ರಾಮಕ್ಕೆ ಶಾಲಾ ಕಟ್ಟಡ ಮಾತ್ರ ಅಭಿವೃದ್ಧಿಗೊಂಡಿಲ್ಲ. ಶಾಲಾ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಸಂಘದ ಕಚೇರಿಯನ್ನು ಮಕ್ಕಳಿಗೆ ನೀಡಿದ್ದರು. ಈಗ ಸಂಘದ ಸದಸ್ಯರು ಕಚೇರಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಇತ್ತ ಗ್ರಾಮಸ್ಥರು ಸಹ ಕಟ್ಟಡ ಬೀಳುವ ಹಂತದಲ್ಲಿ ಇರೋದರಿಂದ ಮುಂಜಾಗ್ರತ ಕ್ರಮವಾಗಿ ಶಾಲೆಗೆ ಬೀಗ ಹಾಕಿದ್ದಾರೆ. ಹೀಗಾಗಿ ಶಾಲೆಯ ಮುಂಭಾಗವೇ ಮಕ್ಕಳು ಪಾಠ ಕೇಳುವಂತಾಗಿದೆ.
Advertisement
ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಒಟ್ಟು 20 ಮಕ್ಕಳಿದ್ದಾರೆ. ಕೊಠಡಿ ಇಲ್ಲದೇ ಬಯಲಿನಲ್ಲಿಯೇ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದಲೂ ಮಕ್ಕಳು ಬಯಲಿನಲ್ಲಿ ಶಾಲೆಯ ಕಟ್ಟಡದ ಮುಂಭಾಗದಲ್ಲಿ ಪಾಠ ಕೇಳುವಂತಾಗಿದೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
Advertisement
Advertisement
ದೇವೇಗೌಡರು, ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಎಲ್ಲರೂ ಅಧಿಕಾರದಲ್ಲಿದ್ದರೂ ನಮ್ಮ ಶಾಲೆಗೆ ಕಟ್ಟಡವಿಲ್ಲ ಎಂಬುವುದು ದುರಂತ. ನಮ್ಮ ಗ್ರಾಮಕ್ಕೆ ಕಳೆದ 10 ವರ್ಷಗಳಿಂದಲೂ ಶಾಲೆಗೆ ಕಟ್ಟಡವಿಲ್ಲ. ಮಕ್ಕಳಿಗೆ ಆಡಲು ಸೂಕ್ತ ಮೈದಾನ ಇಲ್ಲದಂತಾಗಿದೆ. ಒಂದು ವೇಳೆ ಮಳೆ ಬಂದರು ಕಟ್ಟಡ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.