ಲಕ್ನೋ: ರೈತ ಚಳುವಳಿಯ ಪ್ರಮುಖ ನಾಯಕ ರಾಕೇಶ್ ಟಿಕಾಯತ್ (Rakesh Tikait) ಅವರ ಕಾರು ಉತ್ತರ ಪ್ರದೇಶದ (Uttar Pradesh) ಮುಜಫರ್ ಪುರ್ – ಮಿರಾಪುರ ಬೈಪಾಸ್ ರಸ್ತೆಯಲ್ಲಿ (Accident) ಅಪಘಾತಕ್ಕೀಡಾಗಿದೆ. ಅವರು ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅವರ ಕಾರು ರಸ್ತೆ ದಾಟುತ್ತಿದ್ದಾಗ ನೀಲಗೈಗೆ (Nilgai) ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಏರ್‌ಬ್ಯಾಗ್‌ಗಳು ಓಪನ್ ಆಗಿದ್ದು, ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಶುಕ್ರವಾರ ಸಂಜೆ 7:20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನೀಲಗೈಗೆ ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್ ಅವರು, ಅಪಘಾತದ ಸಮಯದಲ್ಲಿ ನಮಗೆ ಏನೂ ಅರ್ಥವಾಗಲಿಲ್ಲ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ನನಗೆ ಪ್ರಜ್ಞೆ ಬಂದಾಗ ಕಾರಿನ ಏರ್‌ಬ್ಯಾಗ್ ತೆರೆದಿತ್ತು. ಕಾರಿನಲ್ಲಿದ್ದವರೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಹೇಳಿದ್ದಾರೆ.
ವಾಹನ ಚಾಲನೆ ಹಾಗೂ ಸೀಟ್ ಬೆಲ್ಟ್ ಧರಿಸುವುದರ ಮಹತ್ವದ ಬಗ್ಗೆ ಮಾತನಾಡಿ, ವಾಹನ ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಾಲನೆ ಮಾಡುವಾಗ, ವೇಗ 100 KM/hಗಿಂತ ಕಡಿಮೆ ಇರಬೇಕು ಎಂದು ಒತ್ತಿ ಹೇಳಿದ್ದಾರೆ.