ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯ 5ಎ ಕಾಲುವೆ ಯೋಜನೆ ಜಾರಿಗೆ ಆಗ್ರಹಿಸಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಮಸ್ಕಿಯಲ್ಲಿ ಆಯೋಜಿಸಿದ್ದ ಬೃಹತ್ ರೈತ ಸಮಾವೇಶಕ್ಕೆ ತೆರಳುತ್ತಿದ್ದ ರೈತ ಮುಖಂಡರೊಬ್ಬರು ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅಮೀನಗಡ ಗ್ರಾಮದ 45 ವರ್ಷದ ಬಸವರಾಜ್ ನಿಡಿಗೋಳ ಹೋರಾಟದಲ್ಲಿ ಸಾವನ್ನಪ್ಪಿದ ರೈತ ಮುಖಂಡ. ಬಸವರಾಜ್ ಅವರು 5 ಎ ಕಾಲುವೆ ಹೋರಾಟ ಸಮಿತಿಯ ಮುಖಂಡರಾಗಿದ್ದು ಹಲವಾರು ಹೋರಾಟಗಳನ್ನ ರೂಪಿಸಿದ್ದರು. ಯೋಜನೆ ಜಾರಿಯಾದ್ರೆ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆಸಿದ್ರು. ಹೋರಾಟದ ಅಂಗವಾಗಿ ಇಂದು ಮಸ್ಕಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ದುರದೃಷ್ಟವಶಾತ್ ರೈತ ಮುಖಂಡ ಬಸವರಾಜ್ ಸಮಾವೇಶಕ್ಕೆ ಬರುವಾಗಲೇ ಅಸುನೀಗಿದ್ದಾರೆ.
ಮೃತರ ಅಂತ್ಯ ಕ್ರಿಯೆ ಲಿಂಗಸುಗೂರಿನ ಅಮಿನಗಡ ಗ್ರಾಮದಲ್ಲೇ ನಡೆಯಲಿದ್ದು ಸಮಾವೇಶ ಮುಗಿದ ಬಳಿಕ ರೈತರೆಲ್ಲಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಮಾವೇಶದಲ್ಲಿ ಮಾನ್ವಿ, ಲಿಂಗಸುಗೂರು, ಸಿಂಧನೂರು ತಾಲೂಕಿನ ನೂರಾರು ರೈತರು ಭಾಗವಹಿಸಿದ್ದರು. ಹಿಂದುಳಿದ ಭಾಗವನ್ನು ಸರ್ಕಾರಗಳು ಪದೇ ಪದೇ ನಿರ್ಲಕ್ಷಿಸುತ್ತಿವೆ. 5ಎ ಕಾಲುವೆ ಯೋಜನೆ ಜಾರಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಅಂತ ರೈತ ಹೋರಾಟಗಾರರು ಸಮಾವೇಶದಲ್ಲಿ ಎಚ್ಚರಿಸಿದ್ದಾರೆ.