Connect with us

Districts

ಯೋಗದ ಫಲ: ಬರಗಾಲದಲ್ಲೂ ಭರ್ಜರಿ ಬೆಳೆ ಬೆಳೆದ ರಾಯಚೂರಿನ ರೈತ

Published

on

Share this

-ಮೌಂಟ್ ಅಬುನಲ್ಲಿ ಮೊದಲ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ
-ಧ್ಯಾನದ ಮೂಲಕ ತೋಟದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ

ರಾಯಚೂರು: ಇಡೀ ರಾಜ್ಯದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಬಿಸಿಲು ಹಾಗೂ ಬರಗಾಲ ನೀರಿನ ಅಭಾವ ಉಂಟುಮಾಡಿದೆ. ನದಿ, ಕೆರೆಗಳು ಬತ್ತಿ ರೈತರು ಬರಗಾಲದ ಭೀಕರತೆಯನ್ನ ಅನುಭವಿಸುತ್ತಿದ್ದಾರೆ. ಇಂತಹ ಬರಗಾಲದಲ್ಲೂ ರಾಯಚೂರಿನ ರೈತರೊಬ್ಬರು ಬಂಗಾರದ ಬೆಳೆ ಬೆಳೆದಿದ್ದಾರೆ. ಅತ್ಯಂತ ದೇಶಿ ಪದ್ಧತಿಯಲ್ಲಿ ಧ್ಯಾನದ ಮೂಲಕ ಭರ್ಜರಿ ಫಸಲು ಸಿಕ್ಕಿದೆ. ಆ ರೈತನ ಜಮೀನು ನೋಡುವುದೇ ಕಣ್ಣಿಗೊಂದು ಹಬ್ಬ.

ರಾಯಚೂರಿನ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ರೈತ ಬಸವರಾಜ್ ಪಪ್ಪಾಯಿ ತೋಟದಲ್ಲಿ ಧ್ಯಾನ ಮಾಡುತ್ತಲೇ ಭರ್ಜರಿ ಬೆಳೆ ಬೆಳೆದಿದ್ದಾರೆ. ಮೂಲತಃ ಸೋಲಾರ್ ಸಿಸ್ಟಮ್ ವ್ಯಾಪಾರಿಯಾಗಿದ್ದ ಬಸವರಾಜ್ ಕೃಷಿಯ ಮೇಲಿನ ಒಲವಿನಿಂದ ಈಗ ರೈತರಾಗಿ ಯಶಸ್ಸು ಕಂಡಿದ್ದಾರೆ. ಇಲ್ಲಿನ ಗೊಲ್ಲದಿನ್ನಿ ಗ್ರಾಮದ ಬಳಿ 3 ಎಕರೆ 32 ಗುಂಟೆ ಜಮೀನು ಹೊಂದಿರುವ ಬಸವರಾಜ್ ಒಂದು ಬೋರ್‍ವೆಲ್ ಸಹಾಯದಿಂದ ಬರಡು ಭೂಮಿಯಲ್ಲಿ ಭರ್ಜರಿ ಪಪ್ಪಾಯಿ, ದಾಳಿಂಬೆ ಬೆಳೆದಿದ್ದಾರೆ.

ಕೆಂಪು ಮಣ್ಣನ್ನ ಹೊಂದಿರುವ ಭೂಮಿಯಲ್ಲಿ ಹನಿನೀರಾವರಿ ಅಳವಡಿಸಿಕೊಂಡಿದ್ದಾರೆ. ಆದ್ರೆ ಇವರು ಬೆಳೆ ಬೆಳೆಯುತ್ತಿರುವ ಪದ್ಧತಿ ಮಾತ್ರ ಹೊಸತು. ಮೌಂಟ್ ಅಬು ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಡೆಸಿದ ಯಶಸ್ವಿ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ. ಅಂದ್ರೆ ಹೊಲದಲ್ಲಿ ಧ್ಯಾನ ಮಾಡುವ ಮೂಲಕ ಧನಾತ್ಮಕ ಶಕ್ತಿಯನ್ನ ಉಂಟುಮಾಡಿ ಉತ್ತಮ ಫಸಲನ್ನ ತೆಗೆಯುವುದು. ಈ ಪದ್ದತಿಯಲ್ಲಿ ಹೊಲದ ಮಾಲೀಕರಿಂದ ಹಿಡಿದು ಕೆಲಸಗಾರರು ಸಹ ಯಾವುದೇ ಮಾದಕ ವಸ್ತುಗಳ ವ್ಯಸನ ಮಾಡುವಂತಿಲ್ಲ.

ಕಳೆದ 20 ವರ್ಷದಿಂದ ಜಾರಿಯಲ್ಲಿರುವ ಯೋಗಿ ಕೇಥಿ ಪದ್ಧತಿಯಲ್ಲಿ ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ ರೈತರು ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಈಗ ರಾಜ್ಯದಲ್ಲೂ ಇದರ ಪ್ರಯೋಗ ನಡೆದಿದೆ. ಸಾಮಾನ್ಯ ಪಪ್ಪಾಯಿ ತೋಟದಲ್ಲಿ ಒಂದು ಗಿಡಕ್ಕೆ 60 ಕೆ.ಜಿ ತೂಕದಷ್ಟು ಹಣ್ಣುಗಳು ಬಿಟ್ಟರೆ ಬಸವರಾಜ್ ತೋಟದಲ್ಲಿ 100 ಕೆ.ಜಿ. ತೂಕದಷ್ಟು ಅಂದ್ರೆ ಸರಾಸರಿ 80 ಹಣ್ಣುಗಳು ಸಿಗುತ್ತಿವೆ. ಕ್ರಿಮಿ, ಕೀಟ, ರೋಗಬಾಧೆಯಿಂದ ದೂರವಿರುವ ಬೆಳೆ ಸಂಪೂರ್ಣ ಸಾವಯವ ಗೊಬ್ಬರದಿಂದಾಗಿದ್ದು, ಕಡಿಮೆ ಖರ್ಚಿನ ಬೇಸಾಯವಾಗಿದೆ.

2400 ಪಪ್ಪಾಯಿ, 2400 ದಾಳಿಂಬೆ ಗಿಡಗಳನ್ನ ಒಂದರ ಪಕ್ಕದಲ್ಲಿ ಒಂದನ್ನ ಬೆಳೆಸಿರುವುದರಿಂದ ಎರಡು ಬೆಳೆಗಳು ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿವೆ. ಏಳು ತಿಂಗಳಲ್ಲೇ ಪಪ್ಪಾಯಿ ಉತ್ತಮ ಫಸಲು ಬಂದಿದ್ದು, ದಾಳಿಂಬೆ ಈಗ ಹೂ ಬಿಡುತ್ತಿದೆ. ಗಿಡದಲ್ಲೆ ಹಣ್ಣು ಮಾಗುವುದರಿಂದ ಅತ್ಯುತ್ತಮ ರುಚಿಯ ಹಣ್ಣುಗಳು ಸಿಗುತ್ತವೆ. ಮುಂಗಡವಾಗಿ ಕಾಯ್ದಿರಿಸಿ ಹಣ್ಣುಗಳನ್ನ ಕೊಳ್ಳಲು ವ್ಯಾಪಾರಿಗಳು ತಾವಾಗಿಯೇ ಬಸವರಾಜ್ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಭೀಕರ ಬರಗಾಲವಿದ್ದರೂ ಅತ್ಯಂತ ಕಡಿಮೆ ಪ್ರಮಾಣದ ನೀರನ್ನ ಬಳಸಿ ಬಸವರಾಜ್ ಉತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಬೆಳೆ ಹಾಗೂ ನೂತನ ಕೃಷಿ ಪದ್ದತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ಬಸವರಾಜ್ ಅವರ ಮೋಬೈಲ್ ಸಂಖ್ಯೆ 9886838888 ಕ್ಕೆ ಸಂಪರ್ಕಿಸಬಹುದು.

Click to comment

Leave a Reply

Your email address will not be published. Required fields are marked *

Advertisement