Districts
ಮಂಡ್ಯ: ಸಾಲಬಾಧೆ ತಾಳಲಾರದೆ ಜಮೀನು ತಡೆಬೇಲಿಗೆ ಹಾಕಿದ ಬೆಂಕಿಗೆ ಹಾರಿ ರೈತ ಆತ್ಮಹತ್ಯೆ!

ಮಂಡ್ಯ: ಸಾಲಬಾಧೆಯಿಂದ ಮನನೊಂದು ಜಮೀನಿನ ತಡೆಬೇಲಿಗೆ ಬೆಂಕಿ ಹಾಕಿ ಬಳಿಕ ಅದಕ್ಕೆ ಹಾರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚೆಲುವೇಗೌಡ(70) ಆತ್ಮಹತ್ಯೆಗೆ ಶರಣಾದ ರೈತ. ಚೆಲುವೇಗೌಡ ಅವರಿಗೆ ನಾಲ್ಕು ಎಕರೆ ಜಮೀನಿದ್ದು, ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು ನಾಲ್ಕು ಲಕ್ಷ ರೂ. ಸಾಲ ಮಾಡಿಕೊಂಡಿದ್ರು. ಜಮೀನಿನಲ್ಲಿ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಇವರಿಗೆ ಸಾಲದ ಹೊರೆ ಹೆಚ್ಚಾಗಿತ್ತು. ಈ ವಿಚಾರವನ್ನ ರೈತ ಚೆಲುವೇಗೌಡ ತನ್ನ ಪತ್ನಿ ಪಾರ್ವತಮ್ಮ ಮತ್ತು ಮಗ ಮೋಹನ್ ಕುಮಾರನೊಂದಿಗೆ ಹೇಳಿಕೊಳ್ಳುತ್ತಿದ್ರು. ಇದರಿಂದ ಮನನೊಂದು ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಜಮೀನಿನ ಬಳಿ ಹೋದ ಚೆಲುವೇಗೌಡ, ಜಮೀನಿನ ಬಳಿ ಇದ್ದ ಬೇಲಿಗೆ ಬೆಂಕಿ ಹಾಕಿ ನಂತರ ಅದರೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಪಾರ್ವತಮ್ಮ ಜಮೀನಿನ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತಿ ಬೆಂಕಿ ನಡುವೆ ಬಿದ್ದಿರುವುದನ್ನ ಗಮನಿಸಿದ ಪಾರ್ವತಮ್ಮ, ಗ್ರಾಮಕ್ಕೆ ಓಡಿ ಹೋಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಗ್ರಾಮಸ್ಥರು, ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಆದ್ರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಚೆಲುವೇಗೌಡ ಹೆಣವಾಗಿ ಹೋಗಿದ್ರು.
ಘಟನೆ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
