ಮಂಡ್ಯ: ಸಾಲ ಮರುಪಾವತಿಸುವಂತೆ ಸಹಕಾರಿ ಬ್ಯಾಂಕ್‍ನಿಂದ ರೈತನಿಗೆ ನೋಟೀಸ್ ನೀಡಿದ್ದರಿಂದ ನೊಂದ ರೈತ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹಕ್ಕಿಮಂಚನಹಳ್ಳಿ ಗ್ರಾಮದ ರೈತ ಹೊನ್ನೇಗೌಡ ಶೀಳನೆರೆ ಆಕ್ರೋಶ ಹೊರಹಾಕಿದ ರೈತ. ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ 09-08-17 ರಂದು 60 ಸಾವಿರ ಬೆಳೆ ಸಾಲ ಪಡೆದಿದ್ದರು. ಇದೀಗ ರೈತ ಪಡೆದ ಸಾಲಕ್ಕೆ ನೋಟಿಸ್ ನೀಡಲಾಗಿದ್ದು, 09-08-18ಕ್ಕೆ ನೀವು ಸುಸ್ತಿದಾರರಾಗಿದ್ದು, 15 ದಿನದೊಳಗೆ ಸಾಲ ಮರುಪಾವತಿಸಿ ಮುಂದೆ ಸಾಲ ಪಡೆಯಲು ಅರ್ಹತೆ ಪಡೆಯಿರಿ. ತಪ್ಪಿದರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ನೋಟಿಸ್‍ನಲ್ಲಿ ರೈತನಿಗೆ ಸೂಚಿಸಲಾಗಿದೆ.
Advertisement
ನೋಟಿಸ್‍ನಿಂದ ಆಕ್ರೋಶಗೊಂಡಿರುವ ರೈತ, ಮುಖ್ಯಮಂತ್ರಿ ಕುಮಾರಸ್ವಾಮಿಯವರು 2018 ಜುಲೈ 10ರವರೆಗೆ ರೈತರ ಸಾಲಮನ್ನಾ ಎಂದಿದ್ದಾರೆ. ಆದರೆ ಸಾಲ ಕಟ್ಟಿ, ಇಲ್ಲದಿದರೆ ಕಾನೂನಿನ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ನೋಟಿಸ್ ನೀಡಿದ್ದಾರೆ. ಈ ಸಂಕಷ್ಟದಲ್ಲಿ ರೈತ ಸಾಯಬೇಕ? ಬದುಕಬೇಕ? ರೈತನ ಬದುಕು ಅತಂತ್ರ ಮಾಡಿರುವ ಕುಮಾರಸ್ವಾಮಿಯವರೇ ಇದರ ಬಗ್ಗೆ ಯೋಚಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.