ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚನಬೆಲೆ ಗ್ರಾಮದ ರೈತರೊಬ್ಬರು ಕುಡಿಯಲು ನೀರು ಕೊಟ್ಟು ಭಗೀರಥ ಎನಿಸಿಕೊಂಡಿದ್ದಾರೆ. ಗ್ರಾಮದ ರೈತ ಲಕ್ಷ್ಮಣ್ ಕೃಷಿಗಾಗಿ ಕೊರೆಸಿದ್ದ ಕೊಳವೆ ಬಾವಿಯಿಂದ ಊರಿನ ಜನರಿಗೆ ಉಚಿತವಾಗಿ ನೀರು ಕೊಡುತ್ತಿದ್ದಾರೆ.
ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಮಂಚನಬಲೆ ಗ್ರಾಮದಲ್ಲಿ ನೀರೇ ಇಲ್ಲ. ಜಿಲ್ಲಾಡಳಿತದಿಂದ ಸಾವಿರಾರು ಅಡಿ ಆಳ ಕೊರೆಸಿರೋ ಕೊಳವೆ ಬಾವಿಗಳೆಲ್ಲ ಬತ್ತಿ ಹೋಗಿವೆ. ಹೀಗಾಗಿ ವಾರಕ್ಕೊಮ್ಮೆ ಗ್ರಾಮಪಂಚಾಯ್ತಿಯಿಂದ ಏರಿಯಾವಾರು ತಲಾ ಮನೆಗೆ 4-5 ಬಿಂದಿಗೆ ನೀರು ಬಿಡಲಾಗುತ್ತಿದೆ. ಆದರೆ ಒಂದು ವಾರಕ್ಕೆ 4-5 ಬಿಂದಿಗೆಯ ನೀರು ಕನಿಷ್ಠ ಕುಡಿಯೋಕು ಸಾಕಾಗುತ್ತಿಲ್ಲ. ಹೀಗಾಗಿ ಗ್ರಾಮದ ರೈತ ಲಕ್ಷ್ಮಣ್ ಎಂಬವರು ತಾನು ಕೃಷಿಕಾಯಕ ಮಾಡಲು ಕೊರೆಸಿದ್ದ ಕೊಳವೆಬಾವಿಯನ್ನ ಊರಿಗೆ ಮೀಸಲಿಟ್ಟಿದ್ದು ಪ್ರತಿದಿನ ಗ್ರಾಮಸ್ಥರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.
ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರೋ ಮಂಚನಬಲೆ ಗ್ರಾಮದಲ್ಲಿ ಗ್ರಾಮಪಂಚಾಯ್ತಿ ವತಿಯಿಂದ 1,000 ಅಡಿಯಿಂದ 2,000 ಅಡಿಯವರೆಗೂ ಕೊರೆಸಲಾಗಿರುವ ಎಲ್ಲಾ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ವಾರಕ್ಕೊಮ್ಮೆ ಸರಬರಾಜು ಮಾಡುತ್ತಿರೋ 4-5 ಬಿಂದಿಗೆ ನೀರು ಏನಕ್ಕೂ ಸಾಕಾಗುತ್ತಿಲ್ಲ ಎಂದು ಜನ ಗ್ರಾಮಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನ ಕೇಳಿದರೆ ಸಮಸ್ಯೆ ಗಮನಕ್ಕೆ ಬಂದಿದೆ, ಆ ಗ್ರಾಮದಲ್ಲಿ ಕೊಳವೆಬಾವಿ ಕೊರೆದ್ರೂ ನೀರು ಸಿಗುತ್ತಿಲ್ಲ. ಅತೀ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಇಡೀ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ. ನದಿ, ನಾಲೆಗಳೂ ಇಲ್ಲ, ಇತ್ತ ಕೆರೆ ಕುಂಟೆಗಳಲ್ಲಿ ನೀರಿಲ್ಲ. ಮತ್ತೊಂದೆಡೆ ಮಳೆಯೂ ಬರುತ್ತಿಲ್ಲ. ಇದೆಲ್ಲದರ ನಡುವೆ ಕೊಳವೆಬಾವಿ ಕೊರೆದು ನೀರು ಕೊಡೋಣ ಅಂದರೆ ಸಾವಿರ ಅಲ್ಲ, ಎರಡು ಸಾವಿರ ಅಡಿ ಕೊರೆದ್ರೂ ನೀರೇ ಸಿಗುತ್ತಿಲ್ಲ. ಏನು ಮಾಡೋದು ಎಂದು ಜಿಲ್ಲಾಡಳಿತ ಕೂಡ ತಲೆ ಕೆಡಸಿಕೊಂಡಿದ್ದರೆ, ಇತ್ತ ಮಂಚನಬಲೆ ಗ್ರಾಮಕ್ಕೆ ಭಗೀರಥನಂತೆ ರೈತ ಲಕ್ಷಣ್ ಸದ್ಯ ಫ್ರೀ ವಾಟರ್ ಸಪ್ಲೈ ಮಾಡುತ್ತಿದ್ದು ಜನ ನಿಟ್ಟುಸಿರುಬಿಡುವಂತಾಗಿದೆ.