ರಾಯಚೂರು: ಮಾದಕ ಪದಾರ್ಥ ಗಾಂಜಾ ಬೆಳೆ ಬೆಳೆಯುವುದು ನಿಷೇಧವಿದ್ದರೂ ರಾಯಚೂರಿನಲ್ಲಿ ಹಲವಾರು ರೈತರು ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ. ಇದೀಗ ಸಿರವಾರ ತಾಲೂಕಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ 4 ಲಕ್ಷ 15 ಸಾವಿರ ಮೌಲ್ಯದ ಗಾಂಜಾ ಬೆಳೆ ಜಪ್ತಿಯಾಗಿದೆ.
ದೋತರಬಂಡಿ ಗ್ರಾಮದ ಪುಷ್ಪರಾಜ್ ಕಾನೂನು ಬಾಹಿರವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದು ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 415 ಕೆ.ಜಿ ಗಾಂಜಾ ಬೆಳೆಯನ್ನ ಜಪ್ತಿ ಮಾಡಿ ಪುಷ್ಪರಾಜನನ್ನ ಬಂಧಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement
ಜಿಲ್ಲೆಯಲ್ಲಿ ಒಂದೊಂದೆ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ನೂರಾರು ಎಕರೆಯಲ್ಲಿ ಗಾಂಜಾ ಬೆಳೆದಿರುವ ಶಂಕೆಯಿದೆ. ಕೆಲ ರೈತರು ತಮ್ಮ ಮನೆಗಳ ಹಿತ್ತಲಲ್ಲಿ ಬೆಳೆದಿದ್ದರೆ, ಕೆಲವರು ರಾಜಾರೋಷವಾಗಿ ಜಮೀನಿನಲ್ಲಿ ಬೆಳೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ಪೊಲೀಸರು ಮೂರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ತಿಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.