ಬೆಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ಅವಧಿಯಲ್ಲಿ ಮಾಡಲಾದ ಶೈಕ್ಷಣಿಕ ಕೆಲಸಗಳನ್ನ ಪೂರ್ಣ ಮಾಡುವಂತೆ ಪತ್ರವನ್ನು ಬರೆದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕಾರಿಗಳಿಂದ ಕೂಡಲೇ ನಿಂತಿರುವ ಕೆಲಸ ಪ್ರಾರಂಭ ಮಾಡಿಸಬೇಕು. ಸಚಿವ ಜಿಟಿ ದೇವೇಗೌಡರಿಗೂ ಈ ಬಗ್ಗೆ ಪತ್ರ ಬರೆದು ಮಾತನಾಡುತ್ತೇನೆ. ಈ ಎಲ್ಲಾ ಕೆಲಸಗಳು ವಿದ್ಯಾರ್ಥಿಗಳ ಪರವಾಗಿದೆ. ಈ ಕೆಲಸಗಳನ್ನ ಮುಂದುವರಿಸಿದರೆ ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತೆ. ಕೂಡಲೇ ಕೆಲಸಗಳನ್ನ ಮುಕ್ತಾಯ ಮಾಡಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯ ಬದಲಾವಣೆ ವಿಚಾರ ಕುರಿತು ಅಂತಹ ಕೆಲಸ ಜಿಟಿ ದೇವೇಗೌಡರು ಮಾಡಬಾರದಿತ್ತು. ಈ ಬಗ್ಗೆ ಸಿದ್ದರಾಮಯ್ಯ ಮಾತಾಡೋದಾಗಿ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಅರ್ಹರನ್ನ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದ್ರು ಅನರ್ಹರನ್ನ ನೇಮಕ ಮಾಡಿದ್ದಾರೆ ಅಂತ ಆರೋಪ ಮಾಡಲಾಗುತ್ತಿದೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ದೇವೇಗೌಡ ವಿರುದ್ಧ ರಾಯರೆಡ್ಡಿ ಕಿಡಿಕಾರಿದರು.
ಉನ್ನತ ಶಿಕ್ಷಣ ಸಚಿವರು ಒಂದು ಡಿಗ್ರಿ ಮಾಡಿಕೊಳ್ಳಲಿ ನಾನೇ ಅವರಿಗೆ ಸಲಹೆ ನೀಡುತ್ತೇನೆ. ಕೆಎಸ್ ಓಯುಗೆ ಮರು ಮಾನ್ಯತೆ ಸಿಕ್ಕಿದೆ. ನಿಮ್ಮ ಊರಲ್ಲೆ ಕೋರ್ಸ್ ಮಾಡಿ ಅಂತ ನಾನೇ ಸಲಹೆ ಕೊಡ್ತೀನಿ. ಎಂಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ್ರೆ ಒಳ್ಳೆಯದು. ಬರೋ ಸ್ವಲ್ಪ ಇಂಗ್ಲೀಷ್ ನಲ್ಲಿ ಯಾಕೆ ಮಾತಾಡಬೇಕು. ಸಚಿವರು ಕನ್ನಡದಲ್ಲೆ ಮಾತಾಡಿದ್ರೆ ತಪ್ಪಿಲ್ಲ. ಎಕ್ಸಾಂ ಬರೆದು ಡಿಗ್ರಿ ಮಾಡಿಕೊಂಡ್ರೆ ದೇವೇಗೌಡರಿಗೆ ಒಳ್ಳೆಯದು ಎಂದು ಉನ್ನತ ಶಿಕ್ಷಣ ಸಚಿವರಿಗೆ ರಾಯರೆಡ್ಡಿ ಟಾಂಗ್ ನೀಡಿದರು.
ಸಿಎಂಗೆ ಬರೆದ ಪತ್ರದ 17 ಅಂಶದ ಕಾರ್ಯಕ್ರಮಗಳು
* ಸಮಗ್ರ ವಿಶ್ವವಿದ್ಯಾಲಯ ಕಾಯ್ದೆ ರಾಜ್ಯಪಾಲರ ಅಂಕಿತ ಪಡೆಯಲು ಸರ್ಕಾರ ಮುಂದಾಗಬೇಕು.
* ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಿರ್ದೇಶಕರು, ಪ್ರಾಧ್ಯಾಪಕರನ್ನ ನೇಮಕ ಮಾಡಲು ಕ್ರಮವಹಿಸಬೇಕು.
* ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ಹಾಸ್ಟಲ್ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ ಮಾಡಬೇಕು.
* ರಾಯಚೂರು ಹೊಸ ವಿಶ್ವವಿದ್ಯಾಲಯ, ಮಂಡ್ಯದಲ್ಲಿ ಯೂನಿಟರಿ ವಿಶ್ವವಿದ್ಯಾಲಯ, ಮಹಾರಾಣಿ ಕಾಲೇಜ್ ಕ್ಲಸ್ಟರ್ ವಿವಿ ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ 55 ಕೋಟಿ ರೂ. ಅನುದಾನ ನೀಡಿದೆ. ಇದಕ್ಕೆ ರಾಜ್ಯಪಾಲರಿಂದ ಅನುಮೋದನೆ ನೀಡಿಸಬೇಕು.
* ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ತುಮಕೂರು ವಿವಿ, ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಮ್ಮ ಸಂಪುಟ ಅನುದಾನ ನೀಡಿತ್ತು. ವಿವಿಗಳ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭ ಮಾಡಬೇಕು.
* ಧಾರವಾಡ ಕರ್ನಾಟಕ ವಿವಿಯ ಅಧೀನದ ಕರ್ನಾಟಕ ಕಾಲೇಜು ಶತಮಾನೋತ್ಸವಕ್ಕೆ ಸಂಪುಟ ಹಣ ಬಿಡುಗಡೆ ಮಾಡಿತ್ತು. ಆದ್ರೆ ಕೆಲಸ ಪ್ರಾರಂಭವಾಗಿಲ್ಲ. ಕೂಡಲೇ ಕೆಲಸ ಪ್ರಾರಂಭ ಮಾಡಬೇಕು.
* ಕೆಎಸ್‍ಓಯು ಗೆ ಮರು ಮಾನ್ಯತೆ ಸಿಕ್ಕಿದೆ. ಹಿಂದೆ ಹಲವು ಜಿಲ್ಲೆಯಲ್ಲಿ ಇದ್ದ ಪ್ರಾದೇಶಿಕ ಕಚೇರಿ ಕಟ್ಟಡಗಳನ್ನ ಆಯಾ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರ ಮಾಡಬೇಕು.
* ಬೆಂಗಳೂರು ಉತ್ತರ ವಿವಿ ಉಳಿಕೆ ಜಮೀನು ಕೊಡಿಸುವ ಕೆಲಸ ಸರ್ಕಾರ ಮಾಡಬೇಕು.
* ವಿಟಿಯು ಐಟಿ ಸೀಜ್ ಮಾಡಿದ ಹಣ ವಾಪಸ್ ಬಂದಿದೆ. ಇದನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು.
* ಕೆಇಎಯ 350 ಕೋಟಿ ಹಣ ಇದೆ. ಇದನ್ನ ಮೆಡಿಕಲ್, ಎಂಜಿನಿಯರ್ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಲು ಕ್ರಮವಹಿಸಬೇಕು.
* ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡಲು 250 ಕೋಟಿ ಅನುದಾನ ನೀಡಲಾಗಿತ್ತು. ಆದ್ರೆ ಕೆಲಸ ಕಾರಣಗಳಿಂದ ಲ್ಯಾಪ್ ಟಾಪ್ ವಿತರಣೆ ಆಗಿಲ್ಲ. ಕೂಡಲೇ ಟೆಂಡರ್ ಕರೆದು ಲ್ಯಾಪ್ ಟಾಪ್ ಹಂಚಿಕೆ ಮಾಡಬೇಕು.
* 310 ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರು ಇಲ್ಲ. ನಾವು ಯುಜಿಸಿ ನಿಯಮ ಬದಲಾವಣೆಗೆ ಮುಂದಾಗಿದ್ದೆವು ಆದರೆ ಅದು ಆಗಲಿಲ್ಲ. ಕೂಡಲೇ ಪ್ರಾಂಶುಪಾಲರ ನೇಮಕ ಸರ್ಕಾರ ಮಾಡಬೇಕು.
* ಪದವಿ ಕಾಲೇಜುಗಳ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪ್ರಕ್ರಿಯೆ ಮಾಡಬೇಕು.
* ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಆದಷ್ಟು ಬೇಗ ತುಂಬಬೇಕು.
* ಸಂಸ್ಕೃತ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಬೇಕು.
* ಎಸ್ ಸಿಪಿ ಯೋಜನೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ. ಈ ಕೆಲಸ ಪ್ರಕ್ರಿಯೆ ಮುಂದುವರೆಸಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews