ಲಕ್ನೋ: ಲೋನ್ ರಿಕವರಿ ಏಜೆಂಟ್‍ಗಳು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ ದೂರವಿರುವ ಸೀತಾಪುರದಲ್ಲಿ ನಡೆದಿದೆ.
ಗ್ಯಾನ ಚಂದ್ರ(45) ಮೃತ ರೈತ. ಪೊಲೀಸರ ಪ್ರಕಾರ, ಗ್ಯಾನ ಚಂದ್ರ ಅವರು ಖಾಸಗಿ ಸಂಸ್ಥೆ ಎಲ್&ಟಿ ಫೈನಾನ್ಸ್‍ನಿಂದ ಕೆಲವು ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದಿದ್ದರು. ಲೋನ್ ಪೂರ್ಣಗೊಳಿಸಲು 1.25 ಲಕ್ಷ ರೂ. ಪಾವತಿಸಬೇಕಿತ್ತು. ಚಂದ್ರ ಅವರು ಎರಡು ವಾರಗಳ ಹಿಂದೆ ಸಂಸ್ಥೆಗೆ 35 ಸಾವಿರ ರೂ. ಹಣವನ್ನ ಪಾವತಿಸಿದ್ದರು. ಲೋನ್ ಹಣ ಪಾವತಿಯಲ್ಲಿ ಕೆಲವು ವಾರ ವಿಳಂಬವಾದ ಕಾರಣ ಎರಡು ದಿನಗಳ ಹಿಂದೆ ಐವರು ರಿಕವರಿ ಏಜೆಂಟ್‍ಗಳು ಮನೆಯ ಬಳಿ ಬಂದು ಟ್ರ್ಯಾಕ್ಟರ್ ಹಿಂದಿರುಗಿಸುವಂತೆ ಚಂದ್ರ ಅವರಿಗೆ ಕೇಳಿದ್ದಾರೆ.
Advertisement
ರೈತ ಹಾಗೂ ಏಜೆಂಟ್‍ಗಳ ನಡುವೆ ವಾಗ್ವಾದ ನಡೆದಿದದ್ದು, ಈ ವೇಳೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರಿಕವರಿ ಏಜೆಂಟ್‍ಗಳು ಮುಂದಾಗಿದ್ದಾರೆ. ಅವರಲ್ಲಿ ಒಬ್ಬರು ಚಂದ್ರ ಅವರನ್ನ ಟ್ರ್ಯಾಕ್ಟರ್ ಮುಂದೆ ತಳ್ಳಿದ್ದಾರೆ. ಹೀಗಾಗಿ ಕುಟುಂಬಸ್ಥರ ಕಣ್ಣ ಮುಂದೆಯೇ ಚಂದ್ರ ಟ್ರ್ಯಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ.
Advertisement
ನಾವು ಜನವರಿ 10ರಂದು 35 ಸಾವಿರ ರೂ. ಪಾವತಿಸಿದ್ದೆವು. ನಮ್ಮ ಅಣ್ಣ ಉಳಿದ ಹಣವನ್ನ ಬೇಗ ಪಾವತಿಸುತ್ತೇನೆಂದು ಹೇಳಿದ್ರು. ಆದ್ರೆ ಅವರು ಅದನ್ನು ಕೇಳಿಸಿಕೊಳ್ಳದೇ ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಅವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವಾಗ ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಅಣ್ಣನನ್ನು ತಳ್ಳಿದ್ರು. ನಂತರ ಅವರು ಟ್ರ್ಯಾಕ್ಟರ್ ಕೆಳಗೆ ಬಿದ್ದು, ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು ಎಂದು ಚಂದ್ರ ಅವರ ಸಹೋದರ ಓಂ ಪ್ರಕಾಶ್ ಹೇಳಿದ್ದಾರೆ.
Advertisement
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಹೇಳಿದ್ದಾರೆ.
Advertisement
ಚಂದ್ರ ಅವರು 2.5 ಎಕರೆ ಜಮೀನು ಹೊಂದಿದ್ದರು. ಆದ್ರೆ ಐವರು ಪುತ್ರಿಯರು ಸೇರಿದಂತೆ 7 ಜನರ ಕುಟುಂಬವನ್ನು ಸಾಕಲು ಅದು ಸಾಕಾಗುತ್ತಿರಲಿಲ್ಲ. ಒಬ್ಬ ಮಗಳಿಗೆ ಶ್ರವಣ ಹಾಗೂ ಮಾತಾಡುವ ತೊಂದರೆಯೂ ಇತ್ತು. ಹಣ ಸಂಪಾದಿಸಲು ಚಂದ್ರ ಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.