Connect with us

Corona

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ – ಆತ್ಮಹತ್ಯೆ ಮಾಡಿಕೊಳ್ಳೋದೊಂದೆ ನಮಗೆ ದಾರಿ

Published

on

ಮಡಿಕೇರಿ: ಕೊರೊನಾ ಇಡೀ ವಿಶ್ವವನ್ನೇ ಬಾಧಿಸಿದೆ. ಅದರಲ್ಲೂ ರೈತರು, ಕೂಲಿ ಕಾರ್ಮಿಕರು, ನಿರ್ಗತಿಕರ ಜೀವನ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದರಿಂದ ಅನ್ನದಾತರು ತಾವು ಬೆಳೆದಿದ್ದ ಬೆಳೆಗಳನ್ನು ಕಟಾವು ಮಾಡಲಾಗದೇ, ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ರೈತನೊಬ್ಬ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ಇದೀಗ ಮಣ್ಣು ಪಾಲಾಗಿದೆ. ಬ್ಯಾಡಗೊಟ್ಟ ಗ್ರಾಮದಲ್ಲಿ 5 ಎಕರೆ ಜಮೀನಿನಲ್ಲಿ ಸುಮಾರು 5 ಲಕ್ಷ ಬಂಡವಾಳ ಹಾಕಿ ಎಲೆ ಕೋಸು ಬೆಳೆ ಬೆಳೆದಿದ್ದರು. ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ಉತ್ತಮ ಬೆಲೆ ಹೊಂದಿದ್ದ ಎಲೆ ಕೋಸು ಬೆಲೆ ಕುಸಿಯುವುದರ ಜೊತೆಗೆ ಕೊಳ್ಳುವವರು ಇಲ್ಲದೆ, ಮಾರುಕಟ್ಟೆಯನ್ನು ತಲುಪಿಸಲು ಸಾಧ್ಯವಾಗದೆ ಎಲೆಕೋಸು ಹೊಲದಲ್ಲೇ ಕೊಳೆತು ಹೋಗುತ್ತಿದೆ.

ಉತ್ತಮ ಫಸಲು ಬಂದರೂ ಅದರಿಂದ ಲಾಭ ಸಿಗಲಿಲ್ಲ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಉಚಿತವಾಗಿ ತೆಗೆದುಕೊಂಡು ಹೋಗಲು ಬಿಟ್ಟಿದ್ದೇವೆ. ಮಧ್ಯವರ್ತಿಗಳು ಕೆ.ಜಿಗೆ 50 ಪೈಸೆ ಅಥವಾ 1 ರೂಪಾಯಿಗೆ ಕೇಳುತ್ತಾರೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ದಾರಿ ಎಂದು ರೈತ ಚಂದ್ರಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೆಲ ತಿಂಗಳುಗಳವರೆಗೆ ದೇಶಾದ್ಯಂತ ನಿಷೇದಾಜ್ಞೆ ಜಾರಿ ಇರುವ ಕಾರಣದಿಂದ ರೈತರ ಸಂಕಷ್ಟಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಾಗಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

Click to comment

Leave a Reply

Your email address will not be published. Required fields are marked *