ಗದಗ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸಾಲಬಾಧೆ ತಾಳಲಾರದೇ ರೈತ ತನ್ನ ಜಮೀನಿನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಫಕೀರಪ್ಪ ಕಬ್ಬೇರಹಳ್ಳಿ(45) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ವಿಜಯಾ ಬ್ಯಾಂಕ್ ನಲ್ಲಿ 3.50 ಲಕ್ಷ ರೂ. ಸಾಲಪಡೆದಿದ್ದು, ಬೀಜ ಗೊಬ್ಬರದ ಅಂಗಡಿಯಲ್ಲಿ 3 ಲಕ್ಷ ರೂ. ಹಾಗೂ ಸಹಕಾರಿ ಬ್ಯಾಂಕ್ ನಲ್ಲಿ 48 ಸಾವಿರ ರೂ., ಒಟ್ಟು 6 ಲಕ್ಷ 98 ಸಾವಿರ ರೂ. ಸಾಲ ಮಾಡಿದ್ದರು.
ಜಮೀನಿನಲ್ಲಿ ಇಡೀ ದಿನ ಎಡೆ ಹೊಡೆದಿದ್ದ ರೈತ ಚಾಲ್ತಿ ಸಾಲಮನ್ನಾ ಮಾಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.