ಗದಗ: ಬೈಕ್ ಕಳ್ಳತನ ಮಾಡಿರೋದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿ ಪೊಲೀಸರು ಅಮಾಯಕ ರೈತನ ಮೇಲೆ ದೌರ್ಜನ್ಯ ನಡೆಸಿರೋ ಆರೋಪವೊಂದು ಜಿಲ್ಲೆಯಲ್ಲಿ ಕೇಳಿಬಂದಿದೆ.
ನಗರ ಠಾಣೆಯ ಪೊಲೀಸ್ ಪೇದೆ ಯಲ್ಲಪ್ಪ ಎಂಬವರ ಮೇಲೆ ಈ ಆರೋಪ ಕೇಳಿಬಂದಿದೆ. ಹುಯಿಲಗೋಳ ಗ್ರಾಮದ ರೈತ ಈರಪ್ಪ ಹೊಸಳ್ಳಿಗೆ ಎದೆಗೆ ಯಲ್ಲಪ್ಪ ಬೂಟುಗಾಲಿನಿಂದ ಒದ್ದಿದ್ದಾರೆ ಅಂತ ಗಾಯಾಳು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಜುಲೈ 23 ರಂದು ಈರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತನ ಎದೆಗೆ ಪೊಲೀಸ್ ಯಲ್ಲಪ್ಪ ಒದ್ದಿದ್ದಾರೆ. ಬೂಟಿನೇಟಿನಿಂದಾಗಿ ಈರಪ್ಪ ಇದೀಗ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಗದಗ ಜಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಸ್ಥಿತಿ ಗಂಭೀರವಾಗಿರುವುದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
Advertisement
ಅಮಾಯಕನನ್ನು ಕರೆತಂದು ಹೊಡೆದಿರುವುದು ಖಂಡನೀಯ. ತಪ್ಪಿತಸ್ಥ ಪೊಲೀಸ್ ಮೇಲೆ ಕ್ರಮಕೈಗೊಳ್ಳದಿದ್ದರೆ, ಕುಟುಂಬ ಸಮೇತ ಪೊಲೀಸ್ ಠಾಣೆಯ ಎದುರು ಹೋರಾಟ ಮಾಡುವುದಾಗಿ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತನಗೆ ಸಂಬಂಧವಿಲ್ಲದ, ಬೈಕ್ ಕಳ್ಳತನ ಒಪ್ಪಿಕೊಳ್ಳುವಂತೆ ಪೇದೆ ಥಳಿಸಿದ್ದಾನೆಂದು ಈರಪ್ಪ ಅವರ ಸಂಬಂಧಿಗಳು ಆರೋಪಿಸಿದ್ದಾರೆ.