ವಿಜಯಪುರ: ಸಾಲ ನೀಡಲು ನಿರಾಕರಿಸಿದ್ದಕ್ಕೆ ರೈತರೊಬ್ಬರು ಬ್ಯಾಂಕ್ ಮ್ಯಾನೇಜನರ್ ಮೇಲೆ ಹಲ್ಲೆ ನಡೆಸಿದ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ನಿವಾಸಿ ಗುರುಲಿಂಗಪ್ಪ ಮೂಡಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಮ್ಯಾನೇಜರ್ ಅಶೋಕ್ ವಾಲಿ ಮೇಲೆ ಹಲ್ಲೆ ನಡೆಸಿದ್ದಾನೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಗುರುಲಿಂಗಪ್ಪ ಪರಾರಿಯಾಗಿದ್ದಾನೆ.
Advertisement
ಏನಿದು ಪ್ರಕರಣ?
ಲಿಂಗಪ್ಪ ಹಲವು ದಿನಗಳಿಂದ ಬೆಳೆ ಸಾಲಕ್ಕಾಗಿ ಕೆವಿಜಿ ಬ್ಯಾಂಕ್‍ಗೆ ಅಲೆದಾಡುತ್ತಿದ್ದ. ಆದರೆ ಇವನ ಮತ್ತು ಸಹೋದರ ಗುರುಸಿದ್ದಪ್ಪ ಮೂಡಲಿಯ ನಡುವೆ 8 ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ವ್ಯಾಜ್ಯವಿತ್ತು. ಅಲ್ಲದೆ 8 ಎಕರೆ ಜಮೀನು ಇಬ್ಬರಿಗೂ ಹಂಚಿಕೆಯಾಗಿರಲಿಲ್ಲ. ಆದ್ದರಿಂದ ಬೆಳೆ ಸಾಲ ನೀಡಬೇಡಿ ಎಂದು ಗುರುಸಿದ್ದಪ್ಪ ಅವರು ಮ್ಯಾನೇಜರ್‍ಗೆ ತಿಳಿಸಿದ್ದರು. ಈ ಕಾರಣಕ್ಕೆ ಮ್ಯಾನೇಜರ್ ಗುರುಲಿಂಗಪ್ಪನಿಗೆ ಸಾಲ ನೀಡಲು ನಿರಾಕರಿಸಿದ್ದರು. ದಿನವೂ ಬ್ಯಾಂಕ್ ಗೆ ಬಂದು ಅಲೆದಾಡಿ ರೋಸಿಹೊಗಿದ್ದ ಗುರುಲಿಂಗಪ್ಪ ಕೋಪಗೊಂಡು ಮ್ಯಾನೇಜರ್‍ಗೆ ಕಪಾಳಮೋಕ್ಷ ಮಾಡಿ ಈಗ ಪರಾರಿಯಾಗಿದ್ದಾನೆ.