ಚಂಡೀಗಢ: ವೈದ್ಯೆಯೊಬ್ಬಳನ್ನು (Doctor) ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈದ ಘಟನೆ ಚಂಡೀಗಢದ (Chandigarh) ಫರಿದಾಬಾದ್‌ನ ಬಲ್ಲಭ್‌ಗಢದಲ್ಲಿ ನಡೆದಿದೆ. ವೈದ್ಯೆಯ ಪೋಷಕರು, ಪತಿ, ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಪ್ರಿಯಾಂಕಾ (34) ಹತ್ಯೆಗೀಡಾದ ವೈದ್ಯೆಯಾಗಿದ್ದು, ಅವರು ಪತಿ ಲಕ್ಷ್ಮಿಚಂದ್‌ನನ್ನು ತೊರೆದು ತನ್ನ 14 ಮತ್ತು 10 ವರ್ಷದ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾಳ ಪತಿ, ಕುಡಿದು ಬಂದು ಅವಳಿಗೆ ಹಿಂಸೆ ನೀಡುತ್ತಿದ್ದ. ಇಂದು ಆಕೆಯ ಹತ್ಯೆಯಾಗಿದೆ. ನಮಗೆ ಮಕ್ಕಳ ಬಗ್ಗೆ ಭಯ ಕಾಡುತ್ತಿದೆ ಎಂದು ಸಹೋದರಿ ಪೂಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಿಯಾಂಕಾ ಕರೆ ಮಾಡಿ ತನ್ನನ್ನು ಕೊಲೆ ಮಾಡುವ ಸಂಚು ನಡೆದಿದೆ ಎಂದು ನನಗೆ ತಿಳಿಸಿದ್ದಳು. ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಆದರೆ ಆಕೆ ಕ್ಲಿನಿಕ್‌ಗೆ ಹೋಗಿ ಬರುವುದಾಗಿ ತೆರಳಿದ್ದಳು. ಅಲ್ಲಿ ಪ್ರಿಯಾಂಕಾಳ ಹತ್ಯೆಯಾಗಿದೆ ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಹರಿಕಿಶನ್ ಪ್ರತಿಕ್ರಿಯಿಸಿ, ಕುಟುಂಬವು ಪತಿ, ಅತ್ತೆ ಮಾವಂದಿರ ಮೇಲೆ ಕೊಲೆ ಆರೋಪ ಮಾಡಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕೃತ್ಯದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದಿದ್ದಾರೆ.