ನವದೆಹಲಿ: ದೇಶದಾದ್ಯಂತ ಜನರು ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಆದರೆ ಹೊಸ ವರ್ಷಕ್ಕೂ ಮುಂಚಿತವಾಗಿ ರೈಲ್ವೇ ಇಲಾಖೆ ರೈಲು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಇಲಾಖೆ ರೈಲ್ವೇ ಸೇವೆಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.
ಉಪನಗರ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರೈಲ್ವೇ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿದೆ. ಅಲ್ಲದೇ ಜನವರಿ 1, 2020 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಮಂಗಳವಾರ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ಮಂಗಳವಾರ ಇಲಾಖೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ, ನಾನ್ ಎಸಿ ರೈಲು ದರಗಳು ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ. ರೈಲ್ವೆ ಮೇಲ್, ಎಕ್ಸ್ ಪ್ರೆಸ್, ಎಸಿ ರಹಿತ ರೈಲುಗಳ ದರದಲ್ಲಿ ಕಿಲೋ ಮೀಟರ್‌ಗೆ 2 ಪೈಸೆ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ಪ್ರತಿ ಕಿಲೋ ಮೀಟರ್‌ಗೆ 4 ಪೈಸೆ ಏರಿಕೆಯಾಗಲಿದೆ ಎಂದು ಇಲಾಖೆ ಘೋಷಿಸಿದೆ.
ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಲಿದೆ. 1,447 ಕಿ.ಮೀ ದೂರ ಕ್ರಮಿಸುವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ ಪ್ರೆಸ್‍ನಲ್ಲಿ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಅಂದರೆ ಅಂದಾಜು 58 ರೂ. ಅಧಿಕವಾಗಿದೆ.
ರೈಲ್ವೇ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಮುಂಗಡ ಟಿಕೆಟ್ ಶುಲ್ಕ ಮತ್ತು ಸೂಪರ್ ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.